ವಿರಸ ಮರೆತು ಬಿಜೆಪಿ ಜೊತೆ ಮತ್ತೆ ಒಂದಾದ ಶಿವಸೇನೆ; ಅಚ್ಚರಿ ಮೂಡಿಸಿದ ಉದ್ಧವ್​ ಠಾಕ್ರೆ ನಡೆ

ಅಹಮದಾಬಾದ್ : “ನಮಗೆ ಪ್ರಧಾನಿ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ, ಆದರೆ, ನಿಮ್ಮ ಪಿಎಂ ಅಭ್ಯರ್ಥಿಯಾಗಿ ಯಾರಿದ್ದಾರೆ?,”- ಹೀಗೆ ಪ್ರಶ್ನಿಸಿದ್ದು. ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ. ಅವರ ನಡೆ ಸದ್ಯ ಅಚ್ಚರಿ ಮೂಡಿಸಿದೆ. ಈ ಮೂಲಕ ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಎಲ್ಲವೂ ಸರಿ ಇದೆ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆ.

ಅಹಮದಾಬಾದ್​ನಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ಉದ್ಧವ್​, “ನಮಗೆ ಒಂದು ನಾಯಕ ಇದ್ದಾನೆ, ಒಂದು ಆಲೋಚನೆ ಇದೆ. ಇಲ್ಲಿ ಮೋದಿ…ಮೋದಿ… ಎನ್ನುವ ಘೋಷಣೆ ಕೇಳಿ ಬರುತ್ತಿದೆ. ಆದರೆ, ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು? ಈ ರೀತಿ ರ್ಯಾಲಿ ನಡೆಸಿ, ಅವರ ಬೆಂಬಲಿಗರು ಒಂದು ನಾಯಕನ ಪರ ಘೋಷಣೆ ಕೂಗಲು ಸಾಧ್ಯವೇ,” ಎಂದು ಪ್ರಶ್ನಿಸಿದರು. ಈ ಮೂಲಕ ಇನ್ನೂ ಪ್ರಧಾನಿ ಅಭ್ಯರ್ಥಿ ಘೋಷಿಸದ ವಿಪಕ್ಷಗಳ ವಿರುದ್ಧ ಅವರು ಹರಿಹಾಯ್ದರು.

“ಲೋಕಸಭಾ ಚುನಾವಣೆಗೆ ವಿಪಕ್ಷಗಳು ಒಂದಾಗಿವೆ. ಇದನ್ನು ನೋಡಿದಾಗ ನನಗೆ ಒಂದು ಮಾತು ನೆನಪಾಗುತ್ತದೆ. ಹೃದಯಗಳು ಒಂದಾಗುತ್ತದೋ ಅಥವಾ ಇಲ್ಲವೋ, ಆದರೆ, ಕೈಗಳು ಮಾತ್ರ ಯಾವಾಗಲೂ ಒಂದಾಗುತ್ತವೆ. ಆದರೆ, ನಮ್ಮ ವಿಚಾರದಲ್ಲಿ ಹೃದಯವೇ ಬೆರೆತಿದೆ,” ಎಂದರು ಅವರು.

“ನಾನು ಇಲ್ಲಿರುವುದನ್ನು ನೋಡಿ ಕೆಲವರು ಆಶ್ಚರ್ಯಗೊಂಡಿರಬಹುದು. ಇನ್ನೂ ಕೆಲವರಿಗೆ ಖುಷಿ ಆಗಿರಬಹುದು. ನಾನು ಇಲ್ಲಿ ಬಂದಿರುವುದನ್ನು ನೋಡಿ ಕೆಲವರಿಗೆ ಹೊಟ್ಟೆ ಉರಿ ಕೂಡ ಆರಂಭವಾಗಿರಬಹುದು. ಬಿಜೆಪಿ ಜೊತೆ ಈ ಮೊದಲು ಕೆಲ ಭಿನ್ನಭಿಪ್ರಾಯಗಳಿದ್ದವು. ಆದರೆ, ಈಗ ಅದು ಸಂಪೂರ್ಣವಾಗಿ ಶಮನವಾಗಿದೆ,” ಎಂದರು ಉದ್ಧವ್​.

ಈ ಮೊದಲು ಬಿಜೆಪಿ ಹಾಗೂ ಶಿವಸೇನೆ ನಡುವೆ ತಿಕ್ಕಾಟ ಆರಂಭವಾಗಿತ್ತು. ಸ್ಥಳೀಯ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈಗ ಈ ನಡೆ ವಿಪಕ್ಷಗಳಲ್ಲಿ ಅಚ್ಚರಿ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ