ಬಿರು ಬಿಸಿಲಿನ ನಡುವೆ ಕಾವೇರುತ್ತಿರುವ ಪ್ರಚಾರದ ಅಬ್ಬರ

ಬೆಂಗಳೂರು, ಮಾ.31- ಲೋಕ ಸಮರಕ್ಕೆ ರಾಜ್ಯದ ಚುನಾವಣಾ ಕಣ ರಂಗೇರುತ್ತಿದ್ದು, ಬಿರು ಬಿಸಿಲಿನ ನಡುವೆ ಪ್ರಚಾರದ ಅಬ್ಬರವೂ ಕಾವೇರುತ್ತಿದೆ.

ಮೊದಲ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ ಎಲ್ಲ ಪ್ರಕ್ರಿಯೆಗಳೂ ಮುಗಿದು ಅಭ್ಯರ್ಥಿಗಳು ಫೈನಲ್ ಆದ ನಂತರ ರಾಜಕೀಯ ಘಟಾನುಘಟಿಗಳು ಅಖಾಡಕ್ಕೆ ಧುಮುಕಿದ್ದು, ತಮ್ಮವರನ್ನು ಗೆಲ್ಲಿಸಿಕೊಳ್ಳಲು ಬೆವರು ಹರಿಸುತ್ತಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳು ಇಂದು ಬೃಹತ್ ಸಮಾವೇಶದ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿವೆ.ಮತ್ತೊಂದೆಡೆ ಬಿಜೆಪಿ ಕೂಡ ಪ್ರಚಾರವನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಂಡಿದ್ದು, ರಾಷ್ಟ್ರೀಯ ನಾಯಕರ ಪ್ರಚಾರಕ್ಕೆ ಸಮಯ, ದಿನಾಂಕಗಳನ್ನು ನಿಗದಿ ಮಾಡಲಾಗುತ್ತಿದೆ.

ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಾವಣಗೆರೆಯಲ್ಲಿ ಇಡೀ ದಿನ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಪರವಾಗಿ ಮತ ಯಾಚನೆ ನಡೆಸಿದ್ದಾರೆ.

ದೋಸ್ತಿ ಪಕ್ಷಗಳು ಜಂಟಿ ಸಮಾವೇಶದ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಗೆ ಸಂದೇಶ ರವಾನಿಸಿದ್ದಾರೆ.

ಇಂದು ಬೆಂಗಳೂರಿನ ಹೊರವಲಯದ ಮಾದಾವರದ ಬಳಿ ನಡೆದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಜಾತ್ಯತೀತ ಶಕ್ತಿಗಳ ಐಕ್ಯತೆ ಪ್ರದರ್ಶಿಸಿದರು.

ರಾಷ್ಟ್ರ ರಾಜಕಾರಣದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳಿಗೆ ಕರ್ನಾಟಕದಿಂದಲೇ ಚಾಲನೆ ನೀಡಲಾಗಿದೆ. ಮೋದಿ ಅವರ ಸರ್ಕಾರವನ್ನು ಜನ ತಿರಸ್ಕರಿಸಲಿದ್ದಾರೆ.

ಬಿಜೆಪಿಯೇತರ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲಿವೆ ಎಂದು ಸಮಾವೇಶದಲ್ಲಿ ಮುಖಂಡರು ಗುಡುಗಿದರು.

ಜೆಡಿಎಸ್-ಕಾಂಗ್ರೆಸ್ ಮುಖಂಡರುಗಳು ಈವರೆಗೂ ತಮ್ಮ ಅಭ್ಯರ್ಥಿಗಳ ಪರವಾಗಿ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದರು. ನಾಳೆಯಿಂದ ಎರಡೂ ಪಕ್ಷಗಳ ಮುಖಂಡರು ಒಂದೇ ವೇದಿಕೆಯಲ್ಲಿ ಕುಳಿತು ಮತಯಾಚನೆ ಮಾಡಲಿದ್ದಾರೆ.ಎರಡೂ ಪಕ್ಷಗಳ ಧ್ವಜಗಳು ಏಕಕಾಲಕ್ಕೆ ಹಾರಾಟ ನಡೆಸಲಿವೆ.

ಬಿಜೆಪಿ ವಿರುದ್ಧ ಐಕ್ಯಮತ ಹೋರಾಟ ನಡೆಸಿ ಹೆಚ್ಚುಸ್ಥಾನ ಗಳಿಸುವ ಸಂಕಲ್ಪವನ್ನು ದೋಸ್ತಿ ಪಕ್ಷಗಳು ಹೊಂದಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ತಮ್ಮದೇ ಕಾರ್ಯತಂತ್ರದ ಮೂಲಕ ಪ್ರಚಾರ ನಡೆಸುತ್ತಿದ್ದು, ಮನೆಮನೆಗೆ ಭೇಟಿ ನೀಡುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ರೂಪಿಸುತ್ತಿದೆ.

ಬಿಜೆಪಿಯ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಕೇಂದ್ರ ಸರ್ಕಾರದ ಸಾಧನೆಗಳ ಕೈಪಿಡಿ ಹಂಚುತ್ತಿದ್ದಾರೆ.ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ ಪಾದಯಾತ್ರೆ ಮೂಲಕ ಪ್ರಚಾರ ಕಾರ್ಯ ನಡೆಯುತ್ತಿದೆ.ಅಲ್ಲಲ್ಲೇ ರೋಡ್ ಶೋಗಳು, ರ್ಯಾಲಿಗಳು ಸಾಮಾನ್ಯವಾಗಿವೆ.

ಉಳಿದಂತೆ ಬಿಎಸ್‍ಪಿ, ಕಮ್ಯುನಿಸ್ಟ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.ಏ.18ಕ್ಕೆ ಚುನಾವಣೆ ನಡೆಯಲಿದ್ದು, ಇನ್ನು 19 ದಿನಗಳ ಕಾಲ ರಾಜ್ಯಾದ್ಯಂತ ಚುನಾವಣೆಯ ಅಬ್ಬರದ ಪ್ರಚಾರ ನಡೆಯಲಿದೆ.

ಎರಡನೆ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಆ ಭಾಗಕ್ಕೆ ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.

ರಾಜ್ಯದ ಪ್ರಮುಖ ನಾಯಕರುಗಳು ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಅತಿ ಹೆಚ್ಚು ಗಮನ ಕೊಟ್ಟಿದ್ದು, ಸಚಿವರು, ಪಕ್ಷದ ಪ್ರಮುಖರು, ಸ್ಟಾರ್ ಪ್ರಚಾರಕರು ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲೇ ಹೆಚ್ಚು ಪ್ರಚಾರ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಮುಂದಿನ ಐದು ವರ್ಷಗಳಿಗೆ ಮತದಾರ ನೀಡುವ ತೀರ್ಪನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ