ವರಿಷ್ಟರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯಡಿಯೂರಪ್ಪ

ಬೆಂಗಳೂರು, ಮಾ.30- ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಮತ್ತು ಆಪ್ತರಿಗೆ ಸ್ಪರ್ಧಿಸಲು ಟಿಕೆಟ್ ನೀಡದೆ ವಿರೋಧಿ ಬಣದವರ ಒತ್ತಡಕ್ಕೆ ಮಣಿದು ಟಿಕೆಟ್ ಘೋಷಣೆ ಮಾಡಿರುವ ವರಿಷ್ಠರ ನಡೆಯ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ.

ಹೈಕಮಾಂಡ್ ಕೂಡಲೇ ತಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಾವು ಪ್ರಚಾರದಿಂದ ದೂರ ಉಳಿಯುವ ಬೆದರಿಕೆಯನ್ನು ಒಡ್ಡಿದ್ದಾರೆ.

ಉದ್ದೇಶಪೂರ್ವಕವಾಗಿಯೇ ನನಗೆ ಅವಮಾನ ಮಾಡುವುದಕ್ಕಾಗಿ ನನ್ನ ಬೆಂಬಲಿಗರಿಗೆ ಟಿಕೆಟ್ ನೀಡುತ್ತಿಲ್ಲ. ಈ ಪ್ರಮಾದವನ್ನು ಸರಿಪಡಿಸಿಕೊಳ್ಳದಿದ್ದರೆ ನಾನು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸದೆ ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಬೆಂಗಳೂರು ದಕ್ಷಿಣ, ಚಿಕ್ಕೋಡಿ, ರಾಯಚೂರು, ಚಿತ್ರದುರ್ಗ ಲೋಕಸಬಾ ಕ್ಷೇತ್ರಗಳಿಗೆ ನಾನು ಹಾಗೂ ಸ್ಥಳೀಯ ಮುಖಂಡರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಸೂಚಿಸದೆ ಇರುವ ವ್ಯಕ್ತಿಗಳನ್ನು ಕಣಕ್ಕಿಳಿಸಿದ್ದೀರಿ. ಇದರಿಂದ ನಾಲ್ಕೈದು ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಿದ್ದು, 28 ಲೋಕಸಭಾ ಕ್ಷೇತ್ರಗಳಿಗೂ ರವಾನೆಯಾಗಿದೆ. ಕಾರ್ಯಕರ್ತರಿಗೆ ನಾನು ಯಾವ ಸಂದೇಶ ಕೊಡಬೇಕೆಂದು ಬಿಎಸ್‍ವೈ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಗೊಂದಲ, ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದಾಗಿ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾವು ಕನಿಷ್ಠ 18 ರಿಂದ 20 ಕ್ಷೇತ್ರಗಳನ್ನು ಗೆಲ್ಲುವಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಉಂಟಾದ ಭಿನ್ನಮತ ನಿಧಾನವಾಗಿ ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸುತ್ತಿದೆ. ಹೀಗಾದರೆ ನಾವು ಒಗ್ಗಟ್ಟಿನಿಂದ ಪ್ರಚಾರ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ವರಿಷ್ಠರ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅದರಲ್ಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ದಿವಂಗತ ಅನಂತ್‍ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ಘಟಕ ತೀರ್ಮಾನಿಸಿತ್ತು. ಅವರಿಗೆ ಪ್ರಚಾರವನ್ನು ಆರಂಭಿಸುವಂತೆ ನಾವೇ ಸೂಚಿಸಿದ್ದೆವು. ಪ್ರಚಾರಕ್ಕಾಗಿ ಕಚೇರಿಯನ್ನು ತೆರೆಯಲಾಗಿತ್ತು.

ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಕೇಂದ್ರ ಚುನಾವಣಾ ಸಮಿತಿಗೂ ಹೆಸರನ್ನು ಕಳುಹಿಸಿಕೊಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಕೊನೆ ಕ್ಷಣದಲ್ಲಿ ಅವರ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದ ಈ ಕ್ಷೇತ್ರ ವ್ಯಾಪ್ತಿಯ ಶಾಸಕರು, ಮುಖಂಡರು, ಬಿಬಿಎಂಪಿ ಸದಸ್ಯರು ಮುನಿಸಿಕೊಂಡು ತೇಜಸ್ವಿ ಪರವಾಗಿ ಪ್ರಚಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನು ಸರಿಪಡಿಸುವವರು ಯಾರು ? ಎಂದು ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕೋಡಿಯಲ್ಲಿ ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ರಮೇಶ್ ಕತ್ತಿಗೆ ಟಿಕೆಟ್ ನೀಡಿದ್ದರೆ ಈ ಬಾರಿ ಗೆಲ್ಲುವ ವಾತಾವರಣವಿತ್ತು. ಇದಕ್ಕಾಗಿ ಅವರಿಗೆ ಚುನಾವಣಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೆವು. ಏಕಾಏಕಿ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಬೆಳವಣಿಗೆಯಿಂದಾಗಿ ಆ ಭಾಗದ ಪ್ರಭಾವಿ ಮುಖಂಡ ಉಮೇಶ್ ಕತ್ತಿ ಮುನಿಸಿಕೊಂಡಿದ್ದಾರೆ. ಏ.4 ರಂದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸ್ವಲ್ಪ ವ್ಯತ್ಯಾಸವಾದರೂ ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳು ಕೈಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲೂ ವರಿಷ್ಠರು ಟಿಕೆಟ್ ನೀಡುವಲ್ಲಿ ಎಡವಿದ್ದಾರೆ. ಅಲ್ಲಿ ಬೋವಿ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಬಹುತೇಕ ಒತ್ತಾಯವಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳನ್ನು ಗೆಲ್ಲಲು ಬೋವಿ ಮತ್ತು ನಾಯಕ ಸಮುದಾಯ ಬೆಂಬಲಕ್ಕೆ ನಿಂತಿತ್ತು.

ಚಿತ್ರದುರ್ಗಕ್ಕೆ ಸಂಬಂಧವಿಲ್ಲ ಆನೇಕಲ್‍ನ ನಾರಾಯಣಸ್ವಾಮಿಯನ್ನು ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಈ ಬೆಳವಣಿಗೆಯಿಂದ ಶಾಸಕರಾದ ಹೊಳಲ್ಕೆರೆಯ ಚಂದ್ರಪ್ಪ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಬೋವಿ ಸಮುದಾಯದ ಶ್ರೀಗಳು ಅಸಮಾಧಾನಗೊಂಡಿದ್ದಾರೆ.

ಬಿಜೆಪಿಗೆ ಮತ ಹಾಕದಂತೆ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ರಾಯಚೂರು ಮೀಸಲು ಕ್ಷೇತ್ರದಲ್ಲೂ ಇದೇ ಪ್ರಮಾದವನ್ನು ಮಾಡಲಾಗಿದೆ. ಅಲ್ಲಿ ಮಾಜಿ ಶಾಸಕ ತಿಪ್ಪರಾಜು ಇಲ್ಲವೆ, ಶಾಸಕ ಶಿವನಗೌಡ ನಾಯಕ್‍ಗೆ ಟಿಕೆಟ್ ನೀಡಬಹುದಿತ್ತು. ಮಾಜಿ ಸಚಿವ ರಾಜಾ ಅಮರೇಶ್ ನಾಯಕ್‍ಗೆ ಟಿಕೆಟ್ ನೀಡುವ ಮೂಲಕ ಭಿನ್ನಮತ ಸೃಷ್ಟಿಯಾಗಿದೆ.

ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಒಂದಲ್ಲ ಒಂದು ಸಮಸ್ಯೆ ಸೃಷ್ಟಿಯಾಗಿರುವುದರಿಂದ ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ.

ಸಂತೋಷ್ ವಿರುದ್ಧ ಅಸಮಾಧಾನ:
ರಾಜ್ಯ ಬಿಜೆಪಿಯಲ್ಲಿನ ಈ ಬೆಳವಣಿಗೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರಣ ಎಂದು ಯಡಿಯೂರಪ್ಪ ವರಿಷ್ಠರಿಗೆ ದೂರು ನೀಡಿದ್ದಾರೆ.

ರಾಜ್ಯ ಬಿಜೆಪಿ ಘಟಕದಲ್ಲಿ ಸಂತೋಷ್ ಹಸ್ತಕ್ಷೇಪ ಮಾಡುತ್ತಿರುವುದು ಅನೇಕರಿಗೆ ಅಸಮಾಧಾನ ತಂದಿದೆ. ತೇಜಸ್ವಿನಿ ಅನಂತ್‍ಕುಮಾರ್‍ಗೆ ಟಿಕೆಟ್ ತಪ್ಪಲು ಅವರೇ ಕಾರಣ.

ಚಿಕ್ಕೋಡಿಯಲ್ಲಿ ರಮೇಶ್‍ಕತ್ತಿಗೆ ಟಿಕೆಟ್ ತಪ್ಪಿಸಿ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಲು ಇವರೇ ಸೂತ್ರಧಾರಿ. ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿರುವುದರಿಂದ ಅಸಮಾಧಾನ ಉಂಟಾಗಿದೆ. ಮೊದಲು ವರಿಷ್ಠರು ಮಧ್ಯಪ್ರವೇಶಿಸಿ ಸಮಸ್ಯೆ ಸರಿಪಡಿಸಬೇಕು ಇಲ್ಲದಿದ್ದರೆ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ