ಬೆಂಗಳೂರು, ಮಾ.30- ನಮ್ಮ ಪಕ್ಷ ಅಧಿಕಾರಕ್ಕಾಗಿ ಯಾರ ಜತೆಯಲ್ಲೂ ಕೈ ಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ನಮ್ಮ ಪಕ್ಷದ ಅಭ್ಯರ್ಥಿಗಳು ಅಧಿಕಾರದ ಆಸೆಗೆ ಬೇರೆಯವರೊಂದಿಗೆ ಕೈ ಜೋಡಿಸಿದರೆ ಅವರನ್ನು ನಮ್ಮ ಪಕ್ಷದಿಂದ ಹೊರಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.
ನಮ್ಮ ಪಕ್ಷದ ನೀತಿ-ನಿಯಮಗಳಿಗೆ ಬದ್ಧರಾಗಿ ಹಾಗೂ ಅವರು ಜನರ ಪರವಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದರು.
ಹಣ ಬಲ, ಜಾತಿಬಲ ಯಾವುದೂ ಇಲ್ಲದೆ ಸಮಾಜಕ್ಕಾಗಿ ದುಡಿಯುವವರೇ ಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾಯಕರು ಜನರ ಹತ್ತಿರ ಬರುತ್ತಾರೆ. ಅದರೆ, ಪ್ರಜಾಕೀಯ ಪಕ್ಷ ಚುನಾವಣೆ ನಂತರವೂ ಜನರ ಸಂಪರ್ಕದಲ್ಲಿದ್ದು, ಅವರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ ಎಂದರು.
ಅಭ್ಯರ್ಥಿಗಳ ಪಟ್ಟಿ: ಉಡುಪಿ-ಚಿಕ್ಕಮಗಳೂರು ಸುರೇಶ್ ಕುಂದರ್, ಹಾಸನ ಹೆಚ್.ಎಂ ಚಂದ್ರೇಗೌಡ, ದಕ್ಷಿಣ ಕನ್ನಡ ವಿಜಯ ಶ್ರೀನಿವಾಸ್, ಚಿತ್ರದುರ್ಗ ದೇವೇಂದ್ರಪ್ಪ , ತುಮಕೂರು ಛಾಯಾ ರಾಜಾಶಂಕರ್, ಮಂಡ್ಯ ಸಿ.ಪಿ.ಗೌಡ, ಮೈಸೂರು ವಿ.ಆಶಾರಾಣಿ ಸೇರಿದಂತೆ 14 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ನಮ್ಮ ಪಕ್ಷದ ಚಿಹ್ನೆ ಆಟೋರಿಕ್ಷಾ . ಇದನ್ನು ಬೆಂಬಲಿಸುವಂತೆ ಮನವಿ ಮಾಡಿದರು.