ಬೆಂಗಳೂರು,ಮಾ.30- ಜಿಲ್ಲಾಧಿಕಾರಿಗಳು ನೀಡಿರುವ ನೋಟಿಸ್ಗೆ ನಾಳೆ ಪತ್ರಿಕಾಗೋಷ್ಠಿ ನಡೆಸಿ ನಂತರ ಸೂಕ್ತ ಉತ್ತರ ನೀಡುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಕೆಲವು ಕಾರಣಗಳಿಂದ ಉತ್ತರಿಸಲು ಸಾಧ್ಯವಾಗಿಲ್ಲ. ಈಗಾಗಲೇ ಕಾನೂನು ತಜ್ಞರ ಜೊತೆ ಚರ್ಚಿಸಿ ನೋಟಿಸ್ಗೆ ಯಾವ ರೀತಿ ಉತ್ತರಿಸಬೇಕು ಎಂಬುದರ ಬಗ್ಗೆ ಮಾತನಾಡಿದ್ದೇನೆ. ನಾಳೆ ಮಾಧ್ಯಮದವರ ಮುಂದೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು. ಹಾಗಾಗಿ ಇಂದು ನೋಟಿಸ್ಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಇಂದೇ ನೋಟಿಸ್ಗೆ ಉತ್ತರ ನೀಡಬೇಕೆಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಸೂಚಿಸಿದ್ದರು. ಕೆಲವು ತಾಂತ್ರಿಕ ಕಾರಣಗಳಿಂದ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಈಗಾಗಲೇ ವಕೀಲರ ಮೂಲಕ ಮಾಹಿತಿ ನೀಡಲಾಗಿದೆ ಎಂದರು.
ತಮಗೆ ನೀಡಿರುವ ಕ್ರಮಸಂಖ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಮಲತಾ, ಇದು ದುರುದ್ದೇಶಪೂರ್ವಕವಾಗಿ ನೀಡಲಾಗಿದೆಯೆಂದು ನಾನು ಹೇಳುವುದಿಲ್ಲ.
ಆದರೆ ಮತದಾರರಲ್ಲಿ ಗೊಂದಲ ಸೃಷ್ಟಿಸಬೇಕೆಂಬ ಕಾರಣಕ್ಕಾಗಿಯೇ ಈ ರೀತಿ ಮಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದರು.
ಮತದಾರರ ಮತದಾನದ ವೇಳೆ ಎರಡು ನಿಮಿಷ ವಿಳಂಬವಾದರೂ ಚಿಂತೆ ಇಲ್ಲ. ಯೋಚಿಸಿ ನಿಮ್ಮ ನಿಮ್ಮ ಅಭ್ಯರ್ಥಿಗಳ ಗುರುತನ್ನು ಖಾತ್ರಿಪಡಿಸಿಕೊಂಡು ಮತ ಹಾಕಬೇಕೆಂದು ಮನವಿ ಮಾಡಿದರು.
ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ ಪತಿಯನ್ನು ಕಳೆದುಕೊಂಡ ನೋವು ಮುಖದಲ್ಲಿ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಅದರ ನೋವೇನು ಎಂಬುದನ್ನು ನನಗೆ ಮಾತ್ರ ಗೊತ್ತು. ಆ ನೋವನ್ನು ಮರೆಯುವುದಕ್ಕಾಗಿಯೇ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಮನೆಯಲ್ಲಿ ಅಳುತ್ತಾ ಕೂರಲು ನಾನು ಸಿದ್ಧವಿಲ್ಲ. ನಿಮ್ಮ ಸೇವೆಗಾಗಿ ಬಂದಿದ್ದೇನೆ ನಿಮ್ಮ ಪ್ರೀತಿಯ ಮುಂದೆ ನೋವುಗಳನ್ನು ನುಂಗುತ್ತಿದ್ದೇನೆ ಎಂದು ಭಾವುಕರಾಗಿ ನುಡಿದರು.
ಕುಮಾರಸ್ವಾಮಿ ಮಾತನಾಡಿರುವುದು ಇಡೀ ಸ್ತ್ರೀಕುಲಕ್ಕೆ ಮಾಡಿರುವ ಅವಮಾನ. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.