ಬೆಂಗಳೂರು, ಮಾ.30-ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ನಡೆಸುವ ಪ್ರಯತ್ನ ನಡೆಸಿತ್ತು. ಈಗ ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಗೆಲುವಿಗೆ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸುತ್ತಿದ್ದು, ಬಿಜೆಪಿಯ ಪ್ರಭಾವಿ ನಾಯಕರನ್ನು ಸೆಳೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಪ್ರಭಾವಿ ಬಿಜೆಪಿ ನಾಯಕ ರಂಜನ್ಗೌಡ ಅವರು ಏ.1ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾಹಿತಿ ಇದೆ. ಸಚಿವ ಯು.ಟಿ.ಖಾದರ್ ಅವರು ರಂಜನ್ಗೌಡ ಅವರನ್ನು ಕರೆದುಕೊಂಡು ಬಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರನ್ನು ಭೇಟಿ ಮಾಡಿಸಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಂಜನ್ಗೌಡ ಅವರು 2018ರ ವಿಧಾನಸಭೆ ಚುನಾವಣೆಯ ಟಿಕೆಟ್ ವಂಚಿತರಾಗಿದ್ದರು. ಬಿಜೆಪಿಯಲ್ಲಿ ಯುವ ಮೋರ್ಚಾ ಅಧ್ಯಕ್ಷರಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರು. ಜಿಲ್ಲೆಯ ಪಕ್ಷ ಸಂಘಟನೆಯಲ್ಲಿ ಪ್ರಭಾವಿಯಾಗಿದ್ದ ರಂಜನ್ಗೌಡ, ಈಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ರಂಜನ್ಗೌಡ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಬಿಜೆಪಿಯ ಯೋಗರಮೇಶ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದೇ ರೀತಿ ಚುನಾವಣಾ ವೇಳೆ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಾಚರಣೆ ನಡೆಸುತ್ತಿದೆ.