ಬೆಂಗಳೂರು, ಮಾ.29-ರಾಜ್ಯದ ಪ್ರತಿಯೊಬ್ಬ ಮತದಾರನಿಗೂ ಇವಿಎಂ, ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ತಿಳಿಸಿದರು.
ಇಂದು ನಗರದ ಖಾಸಗಿ ಹೊಟೇಲ್ನಲ್ಲಿಂದು ಭಾರತೀಯ ಚುನಾವಣಾ ಆಯೋಗ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಇವಿಎಂ, ವಿವಿ ಪ್ಯಾಟ್ಗಳ ಕುರಿತ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿ ಪ್ಯಾಟ್ ಬಳಕೆಯಿಂದ ಮತದಾರ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾನ ಮಾಡಿದ ತಕ್ಷಣದಲ್ಲೇ ವೀಕ್ಷಿಸಬಹುದು.ಬ್ಯಾಲೆಟ್ ಯೂನಿಟ್ನಲ್ಲಿ ಮತ ಗುಂಡಿ ಒತ್ತಿದ ನಂತರ ಮತದಾರ ತಾನು ಮತದಾನ ಮಾಡಿದ ವಿವರವನ್ನು ವಿವಿ ಪ್ಯಾಟ್ನಲ್ಲಿ 7 ಸೆಕೆಂಡ್ವೊಳಗೆ ತಿಳಿದುಕೊಳ್ಳಬಹುದು.
ಇದನ್ನು ಮತ ಚಲಾಯಿಸಿದ ಮತದಾರ ಮಾತ್ರ ವೀಕ್ಷಿಸಲು ಅವಕಾಶ ಇರುತ್ತದೆ. ಇದು 7 ಸೆಕೆಂಡ್ ಪ್ರದರ್ಶನಗೊಳ್ಳುವುದರಿಂದ ಮತದಾರನಿಗೆ ಯಾವುದೇ ಗೊಂದಲವಾಗುವುದಿಲ್ಲ. ತಾನು ಮತಚಲಾಯಿಸಬೇಕಾದ ಅಭ್ಯರ್ಥಿಯ ಚಿಹ್ನೆಯನ್ನು ಮತಗಟ್ಟೆಯಲ್ಲಿ ಖಚಿತಪಡಿಸಿಕೊಂಡು ಬರಬಹುದಾಗಿದೆ ಎಂದು ತಿಳಿಸಿದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 3.5 ಕೋಟಿ ಮತದಾರರಿಗೆ ಇವಿಎಂ ವಿವಿ ಪ್ಯಾಟ್ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು.ಈ ಬಾರಿ 2.3 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 5.6 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಿ ಮತದಾನದ ಬಗ್ಗೆ ಮತದಾರರಲ್ಲಿ ಅರಿವನ್ನು ಮೂಡಿಸಲಾಗುವುದು ಎಂದು ತಿಳಿಸಿದರು.
ವಿದ್ಯುನ್ಮಾನ ಮತಯಂತ್ರದ ಬಗ್ಗೆ ಆರೋಪಿಸುವುದು ಸರಿಯಲ್ಲ. ಮತಯಂತ್ರಗಳನ್ನು ಯಾವುದೇ ರೀತಿಯಲ್ಲೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಆರೋಪ ಕೇಳಿಬಂದಿದೆ. ಇದನ್ನು ಉನ್ನತಮಟ್ಟದ ತಂತ್ರಜ್ಞಾನ ಸಮಿತಿ ಪರಿಶೀಲನೆ ನಡೆಸಿ ಇವಿಎಂ ಮತ್ತು ವಿವಿ ಪ್ಯಾಟನ್ನು ಸಿದ್ಧಪಡಿಸಿವೆ. ಯಾವುದೇ ರೀತಿಯಲ್ಲೂ ಟ್ಯಾಂಪರಿಂಗ್ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಮತಯಂತ್ರಗಳನ್ನು ಅತ್ಯಂತ ಸುರಕ್ಷಿತ ವಾಗಿ ಪೊಲೀಸ್ ಭದ್ರತೆಯ ಜೊತೆಗೆ ಜಿಪಿಎಸ್ ವ್ಯವಸ್ಥೆ ಇರುವ ವಾಹನದಲ್ಲಿ ಸಾಗಿಸಲಾಗುತ್ತದೆ. ಯಾವ ಯಂತ್ರ ಯಾವ ಲೋಕಸಭಾ ಕ್ಷೇತ್ರದ ಮತಗಟ್ಟೆಗೆ ತಲುಪುತ್ತದೆ ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಹಾಗಾಗಿ ಮತಯಂತ್ರ ಬದಲಾವಣೆ ಮತ್ತು ಬೇರೆ ಯಾವುದೇ ಲೋಪವಾಗುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಸಂಜೀವ್ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಭೃಂಗೇಶ್, ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಆಯುಕ್ತ ವೆಂಕಟೇಶ್ ಮುಂತಾದವರಿದ್ದರು.