ಇಂದು ರಾಜಸ್ಥಾನ – ಸನ್ ರೈಸರ್ಸ್ ರಾಯಲ್ ಫೈಟ್ : ಮೊದಲ ಗೆಲುವಿಗಾಗಿ ಉಭಯ ತಂಡಗಳ ಹೋರಾಟ

ಮುತ್ತಿನ ನಗರಿ ಹೈದ್ರಾಬಾದ್ನಲ್ಲಿ ಇಂದು ಸನ್ ರೈಸರ್ಸ್ ಹೈದ್ರಾಬಾದ್-ರಾಜಸ್ಥಾನ ರಾಯಲ್ಸ್ ತಂಡದ ನಡುವೆ ಬಿಗ್ ಫೈಟ್ ನಡೆಯಲಿದೆ..ಹೈದ್ರಾಬಾದ್ನ ರಾಜೀವ್ ಗಾಂಧಿ ಅಂಗಳದಲ್ಲಿ‌ ಉಭಯ ತಂಡಗಳು‌ ಮುಖಾಮುಖಿಯಾಗುತ್ತಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲನ್ನ ಅನುಭವಿಸಿರೋ ಉಭಯ ತಂಡಗಳು ಗೆಲುವಿನ ಖಾತೆ ತೆರೆಯುವ ಉತ್ಸುಕದಲ್ಲಿವೆ. ಇನ್ನೂ ಸನ್ ರೈಸರ್ಸ್ ತವರಿನಲ್ಲಿ ಪಂದ್ಯ ನಡೆಯುತ್ತಿರೋದ್ರಿಂದ ಪಂದ್ಯ ಪಂದ್ಯವನ್ನ ಗೆಲ್ಲಲ್ಲೇಬೇಕೆಂದು ಟೊಂಕ ಕಟ್ಟಿ ನಿಂತಿದೆ. ತವರಲ್ಲೇ ಸನ್ ರೈಸರ್ಸ್ ತಂಡವನ್ನು ಮಕಾಡೆ ಮಲಗಿಸೋಕೆ ರಾಜಸ್ಥಾನ ರಣತಂತ್ರ ಹೆಣದಿದೆ..

ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳು
ಹೌದು ಇಂದು ಹೈದ್ರಾಬಾದ್ನಲ್ಲಿ ನಡೆಯಲಿರುವ ಮಹಾ ಕದನದಲ್ಲಿ ಆತಿಥೇಯ ಸನ್ರೈಸರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಗೆಲ್ಲಲ್ಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ತಂಡ 181 ರನ್ ಗಳಿಸಿದ ಹೊರತಾಗಿಯೂ ಬೌಲರ್ಸ್ಗಳ ವೈಫಲ್ಯದಿಂದಾಗಿ ಕೊನೆಯಲ್ಲಿ ವಿರೋಚಿತ ಸೋಲು ಅನುಭವಿಸಬೇಕಾಯಿತು.

ಇದು ಸನ್ರೈಸರ್ಸ್ ಕತೆಯಾದ್ರೆ ಇನ್ನು ರಾಜಸ್ಥಾನ ರಾಯಲ್ಸ್ ತಂಡ ಪಂಜಾಬ್ ವಿರುದ್ಧ ಚೆನ್ನಾಗಿ ಆಡಿದ ಹೊರತಾಗಿಯೂ ಸೋಲು ಕಂಡಿತು. ಆ ಪಂದ್ಯದಲ್ಲಿ ಜೋಸ್ ಬಟ್ಲರ್ ಔಟಾಗದಿದ್ದಿದ್ರೆ ರಾಜಸ್ತಾನ ತಂಡ ಸುಲಭವಾಗಿ ಗೆದ್ದು ಬಿಡುತ್ತಿತ್ತು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಸನ್ರೈಸರ್ಸ್- ರಾಜಸ್ಥಾನ ಫೈಟ್
ಪಂದ್ಯ – 9
ಗೆಲುವು – 5
ಸೋಲು – 4

ಐಪಿಎಲ್ನಲ್ಲಿ ಇದುವರೆಗೂ ಸನ್ರೈಸರ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಇದುವರೆಗೂ 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್ರೈಸರ್ಸ್ 5 ಬಾರಿ ಗೆದ್ದು ಪ್ರಾಬಲ್ಯ ಮೆರೆದಿದೆ. ರಾಜಸ್ಥಾನ ರಾಯಲ್ಸ್ 4 ಬಾರಿ ಸೋಲುಕಂಡಿದೆ.

ಸನ್ರೈಸರ್ಸ್ ತಂಡಕ್ಕಿದೆ ತವರಿನ ಬಲ
ಸನ್ ರೈಸರ್ಸ್ ಹೈದ್ರಾಬಾದ್ ಬಲಿಷ್ಠ ತಂಡವಾಗಿದ್ದು ಎದುರಾಳಿಗಳನ್ನು ಮಣ್ಣು ಮುಕ್ಕಿಸೋ ತಾಕತ್ತು ಹೊಂದಿದೆ. ಇನ್ನೂ ಆರಂಭಿಕರಾದ ಡೇವಿಡ್ ವಾರ್ನರ್, ಜಾನಿ ಬೇರ್ ಸ್ಟೋ ಉತ್ತಮ ಫಾರ್ಮ್ನಲ್ಲಿರೋದು ತಂಡಕ್ಕೆ ಪ್ಲಸ್ ಪಾಯಿಂಟ್. ಆಲ್ರೌಂಡರ್ ವಿಜಯ್ ಶಂಕರ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಿಂದ ತಂಡಕ್ಕೆ ನೆರವಾಗಬಲ್ಲರು. ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ನೇತೃತ್ವದ ಸನ್ ರೈಸರ್ಸ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ, ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್, ವೇಗಿ ಸಂದೀಪ್ ಶರ್ಮಾ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.. ತವರಿನಲ್ಲಿ ಸನ್ ರೈಸರ್ಸ್ ತಂಡ ಉತ್ತಮ ದಾಖಲೆ ಹೊಂದಿರೋದು ತಂಡಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ಮುತ್ತಿನ ನಗರಿಯಲ್ಲಿ ‘ರಾಜ’ನಾಗಬೇಕು ರಾಜಸ್ಥಾನ
ಇನ್ನು ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್, ರಹಾನೆ, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ ಬ್ಯಾಟಿಂಗ್ ತಂಡಕ್ಕೆ ಬಲ ತುಂಬಿದ್ರೆ. ಆಲ್ರೌಂಡರ್ಗಳಾದ ಬೆನ್ ಸ್ಟೋಕ್, ಕೃಷ್ಣಪ್ಪ ಗೌತಮ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚು ಹರಿಸಬಲ್ಲರು. ಜೊತೆಗೆ ವೇಗಿ ಜೋಫ್ರಾ ಆರ್ಚರ್, ಜಯದೇವ್ ಉನಾದ್ಕಟ್, ಧವಳ್ ಕುಲಕರ್ಣಿ, ಕನ್ನಡಿಗ ಶ್ರೇಯಸ್ ಗೋಪಾಲ್ ತಂಡದ ಶಕ್ತಿಯಾಗಿದ್ದಾರೆ.

ಡೇವಿಡ್ ವಾರ್ನರ್- ಸ್ಟೀವನ್ ಸ್ಮಿತ್ ಮುಖಾಮುಖಿ
ಬಾಲ್ ಟ್ಯಾಪರಿಂಗ್ನಿಂದ 1 ವರ್ಷ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಸದ್ಯ ಸನ್ ರೈಸರ್ಸ್ ಪರ ಆಡ್ತಿರೋ ಡೇವಿಡ್ ವಾರ್ನರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇನ್ನೂ ರಾಜಸ್ಥಾನದ ಪರ ಕಣಕ್ಕಿಳಿಯುತ್ತಿರೋ ಸ್ಟೀವನ್ ಸ್ಮಿತ್ ಕಳೆದ ಪಂದ್ಯದಲ್ಲಿ ಫ್ಲಾಪ್ ಆಗಿದ್ರು. ಆದ್ರೆ, ಇಂದಿನ ಪಂದ್ಯದಲ್ಲಿ ಸ್ಮಿತ್ ಹಾಗೂ ವಾರ್ನರ್ ಮುಖಾಮುಖಿ ಸಾಕಷ್ಟು ಕುತೂಹಲ ಮೂಡಿಸಿದೆ.

ಒಟ್ನಲ್ಲಿ ತವರಿನ ಪಂದ್ಯ ಗೆದ್ದು ಮಾನ ಉಳಿಸಕೊಳ್ಳುವ ಚಿಂತೆಯಲ್ಲಿ ಸನ್ ರೈಸರ್ಸ್ ಇದ್ರೆ. ಪಂಜಾಬ್ ವಿರುದ್ಧದ ಸೋಲಿನ ಕಹಿಯಿಂದ ಹೊರಬರಲು ರಾಜಸ್ಥಾನ ರಾಯಲ್ಸ್ಗೆ ಅನಿವಾರ್ಯವಾಗಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ