ಬೆಂಗಳೂರು, ಮಾ.29-ಬಾಕಿ ಉಳಿದಿರುವ ಮೂರು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಕೊನೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಲಾಗಿದ್ದರೆ, ಚಿಕ್ಕೋಡಿಯಿಂದ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ರಾಯಚೂರು ಮೀಸಲು ಲೋಕಸಭಾ ಕ್ಷೇತ್ರದಿಂದ ರಾಜ ಅಮರೇಶ್ ನಾಯಕ್ಗೆ ಮಣೆ ಹಾಕಲಾಗಿದೆ.
ಕೇಂದ್ರ ಚುನಾವಣಾ ಸಮಿತಿ ಬಾಕಿ ಉಳಿದಿದ್ದ ಮೂರು ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ರಾಜ್ಯದ ಮಂಡ್ಯ ಹೊರತುಪಡಿಸಿ 27 ಲೋಕಸಭಾ ಕ್ಷೇತ್ರಗಳಿಗೂ ಬಿಜೆಪಿ ತನ್ನ ಹುರಿಯಾಳುಗಳನ್ನು ಘೋಷಣೆ ಮಾಡಿದಂತಾಗಿದೆ.
ಈ ಹಿಂದೆ ಎರಡು ಬಾರಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಕೊಪ್ಪಳದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಿರಲಿಲ್ಲ. ಕರಡಿ ಸಂಗಣ್ಣ ವಿರುದ್ಧ ವಿರೋಧಿ ಅಲೆ ಇರುವುದರಿಂದ ಅವರಿಗೆ ಟಿಕೆಟ್ ನೀಡಬಾರದೆಂದು ಸ್ಥಳೀಯ ಮುಖಂಡರು ಒತ್ತಡ ಹಾಕಿದ್ದರು. ಹೀಗಾಗಿ ಟಿಕೆಟ್ ಘೋಷಣೆ ಮಾಡಿರಲಿಲ್ಲ. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕರಡಿ ಸಂಗಣ್ಣ ಅವರಿಗೆ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಹೈಕಮಾಂಡ್ ಅವರ ಬೇಡಿಕೆಗೆ ಅಸ್ತು ಎಂದಿದೆ.
ಚಿಕ್ಕೋಡಿಯಿಂದ ಮಾಜಿ ಸಂಸದ ರಮೇಶ್ಕತ್ತಿಗೆ ಟಿಕೆಟ್ ನೀಡಬೇಕೆಂದು ಖುದ್ದು ಯಡಿಯೂರಪ್ಪನವರು ವರಿಷ್ಠರಿಗೆ ಮನವಿ ಮಾಡಿ ಕೊಂಡಿದ್ದರು. ಆದರೆ ಈ ಕ್ಷೇತ್ರದಿಂದ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಶಾಸಕ ರಮೇಶ್ ಜಾರಕಿ ಹೊಳಿ, ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಿದರೆ ಬಿಜೆಪಿ ಬೆಂಬಲಕ್ಕೆ ನಿಲ್ಲುವುದಾಗಿ ವರಿಷ್ಠರ ಬಳಿ ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಉಮೇಶ್ಕತ್ತಿ ಒತ್ತಡವನ್ನು ಲೆಕ್ಕಿಸದೆ ಅಣ್ಣಾಸಾಹೇಬ್ ಜೊಲ್ಲೆಗೆ ಮಣೆ ಹಾಕಲಾಗಿದೆ.
ರಾಯಚೂರು ಕ್ಷೇತ್ರದಿಂದ ಶಾಸಕ ಶಿವನಗೌಡ ನಾಯಕ್ ಸೇರಿದಂತೆ ಮತ್ತಿತರರು ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಹೈಕಮಾಂಡ್ ಅಮರೇಶ್ ನಾಯಕ್ ಅವರಿಗೆ ಟಿಕೆಟ್ ನೀಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ಈಗಾಗಲೇ ಬೆಂಬಲ ಘೋಷಿಸಿರುವುದರಿಂದ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. 28 ಲೋಕಸಭಾ ಕ್ಷೇತ್ರಗಳ ಪೈಕಿ 27 ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ.