ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ಬಳಸಿಕೊಂಡು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಿದೆ : ಸಚಿವ ಎಸ್.ಆರ್.ಶ್ರೀನಿವಾಸ್

ತುಮಕೂರು, ಮಾ.28- ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ಬಳಸಿಕೊಂಡು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಇನ್ನಿತರ ಕಡೆ ಜೆಡಿಎಸ್ ಮುಖಂಡರ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿರುವುದು ಖಂಡನೀಯ.ಈ ತಂತ್ರಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಯಾರೂ ಹೆದರುವುದಿಲ್ಲ ಎಂದರು.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಜನರು ಸಿಬಿಐ ವಿರುದ್ಧ ತಿರುಗಿಬಿದ್ದಿದ್ದರು. ಅದೇ ರೀತಿ ಇಲ್ಲಿಯೂ ಕೂಡ ನಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಇದು ರಾಜಕೀಯ ದುರುದ್ದೇಶದಿಂದ ನಡೆದಿರುವ ದಾಳಿಯಾಗಿದೆ.ಇದಕ್ಕೆ ಹೆದರುವವರು ನಾವಲ್ಲ ಎಂದರು.

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಐಟಿ ದಾಳಿ ಬಗ್ಗೆ ಸುಳಿವು ನೀಡಿದ್ದರು. ಅದೇ ರೀತಿ ಐಟಿ ದಾಳಿಯಾಗಿದೆ. ಈಗಾಗಲೇ ಹಲವಾರು ಕಡೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಐಟಿ ದಾಳಿಯಿಂದ ಬೇರೆ ಪಕ್ಷದವರನ್ನು ಕಟ್ಟಿಹಾಕಲು ಹೊರಟಿರುವುದು ವಿಶೇಷವೇನಲ್ಲ. ಆದರೆ, ಈ ಎಲ್ಲ ಬೆಳವಣಿಗೆಗಳನ್ನು ದೇಶ ಮತ್ತು ರಾಜ್ಯದ ಜನರು ಗಮನಿಸುತ್ತಿದ್ದಾರೆ.ಇದೊಂದು ಸೇಡಿನ ರಾಜಕಾರಣ.ಚುನಾವಣೆಯಲ್ಲಿ ನಮ್ಮ ಉತ್ಸಾಹ ಕುಗ್ಗಿಸಲು ಇದೊಂದು ತಂತ್ರಗಾರಿಕೆಯಾಗಿದೆ. ಇದಕ್ಕೆ ನಾವು ಜಗ್ಗುವುದಿಲ್ಲ ಎಂದರು.

ನಿಮ್ಮ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಮನೆ ಮೇಲೆ ದಾಳಿಯಾಗಬಹುದು ಎಂಬ ಮಾಹಿತಿ ಇದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಹತ್ರ ಏನಿದೆ ಅಂತ ಬರ್ತಾರೆ. ಬಂದ್ರೆ ಬರ್ಲಿ ಬಿಡಿ, ನೋಡಿಕೊಳ್ಳೋಣ. ನಮ್ಮ ಬಳಿ ಕಪ್ಪು ಹಣ ಇಲ್ಲ. ಇರೋದೆಲ್ಲ ಬಿಳಿ ನೋಟೇ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ