ಮೇರಠ್: ಕಾಂಗ್ರೆಸ್ ನ್ನು ಕಿತ್ತುಹಾಕಿದಲ್ಲಿ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆಯಾಗಲು ಸಾಧ್ಯ. ಭ್ರಷ್ಟಾಚಾರಕ್ಕೆ ಬೆಂಬಲಿಸುವ, ವಂಶಾಡಳಿತದ ಪಕ್ಷವನ್ನು ತೊಡೆದು ಹಾಕಲು ಬಿಜೆಪಿಗೆ ಮತಹಾಕಿದಲ್ಲಿ ನವ ಭಾರತ ಕಲ್ಪನೆಯು ಸಾಕಾರಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮೇರಠ್ನಿಂದ 2019ರ ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನವನ್ನು ಆರಂಭಿಸಿರುವ ಪ್ರಧಾನಿ ಮೋದಿ ಮತದಾನ ಮಾಡುವಾಗ 2014ರ ಹಿಂದಿನ ಭಾರತ ಹಾಗೂ 2014ರ ನಂತರದ ಭಾರತವನ್ನು ನೆನಪಿಸಿಕೊಂಡು ಮತದಾನ ಮಾಡಿ ಎಂದು ಜನತೆಗೆ ಕರೆ ನೀಡಿದರು.
ಅಂತರಿಕ್ಷದಲ್ಲಿ ಶತ್ರುಗಳ ಉಪಗ್ರಹವನ್ನು ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆಗೆ ಅನುಮತಿ ನೀಡುವಂತೆ ವಿಜ್ಞಾನಿಗಳು ಒತ್ತಾಯಿಸುತ್ತಲೇ ಇದ್ದರು. ಅವರ ಸರಕಾರವು (ಯುಪಿಎ) ಈ ನಿರ್ಧಾರವನ್ನೂ ಮುಂದಕ್ಕೆ ಹಾಕಿತ್ತು. ಭಾರತವನ್ನು 21ನೇ ಶತಮಾನದಲ್ಲಿ ಬಲಾಢ್ಯವಾಗಿಸಲು ಮತ್ತು ಅದರ ರಕ್ಷಣೆಗಾಗಿ, ಈ ನಿರ್ಧಾರವನ್ನು ಅದೆಷ್ಟೋ ಹಿಂದೆಯೇ ತೆಗೆದುಕೊಳ್ಳಬೇಕಿತ್ತು, ಆದರೆ ಅವರು ವಿಳಂಬ ಮಾಡಿದರು ಎಂದು ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುದ ಪ್ರಧಾನಿ ಮೋದಿ, ಎ-ಸ್ಯಾಟ್ ಎಂಬ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಒಂದುವೇಳೆ ಸ್ವಲ್ಪ ಎಡವಟ್ಟಾಗಿದ್ದರೂ ಈ ಜನ ನನ್ನ ಪ್ರತಿಕೃತಿ ದಹಿಸುತ್ತಿದ್ದರು ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದರು.
ಬಡವರಿಗಾಗಿ ಬ್ಯಾಂಕ್ ಖಾತೆಯನ್ನು ತೆರೆಯುವ ನನ್ನ ಕೆಲಸವನ್ನು ದೂಷಿಸಿದವರೇ ಇಂದು, ಅದೇ ಖಾತೆಗಳಿಗೆ ಹಣ ಹಾಕುತ್ತೇವೆ ಅಂತ ಮಾತನಾಡುತ್ತಿದ್ದಾರೆ ಎಂದ ಪ್ರಧಾನಿ ಮೋದಿ, “ಮತದಾನ ಮಾಡುವ ಮುಂಚೆ ಭಾರತದ ಎರಡು ಚಿತ್ರಗಳನ್ನು ನೆನಪಿಗೆ ತಂದುಕೊಳ್ಳಿ – ಒಂದನೆಯದು 2014ರ ಮೊದಲಿನ ಭಾರತ ಹಾಗೂ 2014ರ ನಂತರದ ಭಾರತ” ಎಂದು. ಕಾಂಗ್ರೆಸ್ಸನ್ನು ಕಿತ್ತು ಹಾಕಿದರಷ್ಟೇ ದೇಶದ ಬಡತನ ನಿರ್ಮೂಲನೆಯಾಗಲು ಸಾಧ್ಯ ಎಂದರು.
ಐದು ವರ್ಷಗಳ ಹಿಂದೆ ನೀವು ನನಗೆ ಆಶೀರ್ವಾದ ಮಾಡಿದರೆ, ಬಡ್ಡಿ ಸಮೇತ ನಿಮ್ಮ ಪ್ರೀತಿಯನ್ನು ಮರಳಿಸುವುದಾಗಿ ಹೇಳಿದ್ದೆ. ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ ಪ್ರತಿಯೊಂದು ಮಾಹಿತಿ ನೀಡುತ್ತೇನೆ ಎಂದಿದ್ದೆ. ಈ ಎರಡೂ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಮೋದಿ ಹೇಳಿದರು.
ನಾನೊಬ್ಬ ಚೌಕಿದಾರ. ಚೌಕಿದಾರ ಎಂದಿಗೂ ಯಾರಿಗೂ ಅನ್ಯಾಯ ಆಗಲು ಅವಕಾಶ ನೀಡುವುದಿಲ್ಲ. ಪ್ರತಿಯೊಬ್ಬರೂ ಉತ್ತರದಾಯಿಗಳಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಾನು ಮಾಡಿದ ಕೆಲಸಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇನೆ ಎಂದರು.
ಈ ಬಾರಿಯ ಲೋಕಸಭೆ ಚುನಾವಣೆಯು ಚೌಕಿದಾರ ಮತ್ತು ಕಳಂಕಿತರ ನಡುವಿನ ನೇರ ಹಣಾಹಣಿಯಾಗಿದೆ ಎಂದು ಬಣ್ಣಿಸಿದ ಅವರು, ಹೊಸ ಭಾರತದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವವರು ಮತ್ತು ಖಚಿತ ನೀತಿ ನಿಯಮಗಳಿಲ್ಲದ, ಭ್ರಷ್ಟಾಚಾರದಲ್ಲಿ ಮುಳುಗಿರುವ ವಂಶಾಡಳಿತದ ಮಧ್ಯೆ ನಿಮಗೆ ಆಯ್ಕೆ ಇದೆ. ಇಲ್ಲಿ ನೆರೆದಿರುವ ಜನರ ಸಂಖ್ಯೆಯೇ ಮುಂಬರುವ ಚುನಾವಣೆಯ ಫಲಿತಾಂಶದ ಪ್ರತೀಕವಾಗಿದೆ ಎಂದು ಹೇಳಿದರು.
Remove Congress, Poverty Will Also Go Away, Says PM Modi