ನವದೆಹಲಿ: ಭಾರತ ನೀಡಿದ 22 ತಾಣಗಳಲ್ಲಿ ಉಗ್ರರ ಯಾವುದೇ ರೀತಿಯ ಕೇಂದ್ರಗಳೂ ಕಾರ್ಯಚರಿಸುತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆ ನೀಡಿದೆ.
ಪುಲ್ವಾಮಾ ದಾಳಿಯ ಬಳಿಕ ತನಿಖೆ ನಡೆಸಲು ಭಾರತದಿಂದ ಪಾಕಿಸ್ತಾನ ಸಾಕ್ಷಿಗಳನ್ನು ಕೇಳಿತ್ತು. ಇದರ ಅನ್ವಯ ಭಾರತ ಪಾಕ್ ನೆಲದಲ್ಲಿ ಇರುವ ಉಗ್ರರ ಅಡುಗುತಾಣಗಳ ಬಗ್ಗೆ ಮಾಹಿತಿ ನೀಡಿತ್ತು. ಭಾರತ ನೀಡಿದ ಮಾಹಿತಿಗೆ ತನಿಖೆ ನಡೆಸಿ ಪ್ರತಿಕ್ರಿಯೆ ನೀಡಿರುವ ಪಾಕ್, ಭಾರತ ಉಲ್ಲೇಖ ಮಾಡಿದ್ದ ಸ್ಥಳಗಳಲ್ಲಿ ಯಾವುದೇ ಉಗ್ರರ ಕೇಂದ್ರಗಳು ಇಲ್ಲ ಎಂದು ಮಾಹಿತಿ ನೀಡಿದೆ.
ಪಾಕ್ ವಿದೇಶಾಂಗ ಕಚೇರಿಯು ಈ ಮಾಹಿತಿಯನ್ನು ನೀಡಿದೆ. ಪಾಕ್ ಅಧಿಕಾರಿಗಳು ದಾಖಲೆಯಲ್ಲಿ ತಿಳಿಸಿರುವ ಎಲ್ಲ 22 ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಎಲ್ಲೂ ಕೂಡ ಉಗ್ರರ ಶಿಬಿರಗಳಿಲ್ಲ. ಅಲ್ಲದೇ ಭಾರತ ನೀಡಿದ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದ್ದು, ಉಗ್ರರು ಸಂವಹನ ನಡೆಸಿದ ವಿಡಿಯೋ, ಸಂದೇಶಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ವರದಿಯಲ್ಲಿ ನೀಡಿದ್ದ 54 ಮಂದಿಯ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಅವರಿಗೂ ಹಾಗೂ ದಾಳಿಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಭಾರತ ಬಯಸಿದರೆ, ಈ ಎಲ್ಲ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ಉಗ್ರನೊಬ್ಬ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾಗಿದ್ದರು. ಜೈಷ್ ಎ ಮೊಹಮ್ಮದ್ ಈ ದಾಳಿಯ ಹೊಣೆಹೊತ್ತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಘಟನೆಗೆ ಜೈಷ್ ಎ ಮೊಹಮ್ಮದ್ ಸಂಘಟನೆಯನ್ನು ಹೊಣೆಯಾಗಿಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ಫೆ.27ರಂದು ಪಾಕಿಸ್ತಾನಕ್ಕೆ ನೀಡಿತ್ತು.
‘No terror camps at 22 locations shared by India’: Pakistan