ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಐಟಿ ದಾಳಿ ಬೆನ್ನಲ್ಲಿ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅದಾಯ ತೆರಿಗೆ ಇಲಾಖೆ, ನಾವು ಯಾವುದೇ ಸಚಿವರು, ಶಾಸಕರು ಅಥವಾ ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೈಸೂರು, ಮಂಡ್ಯ, ಹಾಸನ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧೆಡೆ ನಡೆದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯ ಸಂದರ್ಭದಲ್ಲಿ ಯಾವುದೇ ಸಚಿವರು, ಶಾಸಕರು ಅಥವಾ ಸಂಸದರನ್ನು ಗುರಿಯಾಗಿಸಿಕೊಂಡಿಲ್ಲ. ಬದಲಿಗೆ ದೊರೆತಿರುವ ಖಚಿತ ಮಾಹಿತಿಯನ್ನು ಆಧರಿಸಿ ಗುತ್ತಿಗೆದಾರರು ಮತ್ತವರ ಸಂಬಂಧಿಕರ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಕರ್ನಾಟಕ-ಗೋವಾ ವಲಯದ ಆದಾಯ ತರಿಗೆ ಇಲಾಖೆ ಆಯುಕ್ತರ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ದಾಳಿ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಮನವಿ ಮೇರೆಗೆ ಶಿಷ್ಟಾಚಾರದ ಪ್ರಕಾರ ಸಿಆರ್ಪಿಎಫ್ ಸಿಬ್ಬಂದಿಯನ್ನು ಭದ್ರತಾ ವ್ಯವಸ್ಥೆಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಿವಿಧ ಬಗೆಯ ವೃತ್ತಿಗಳು ಮತ್ತು ವ್ಯಾಪಾರ ವಹಿವಾಟು ನಡೆಸುತ್ತಿರುವವರು ಸೇರಿ ಅಧಿಕಾರಶಾಹಿ ವರ್ಗ, ಸಂಸ್ಕರಣಾ ಘಟಕಗಳು, ಬಹುರಾಷ್ಟ್ರೀಯ ಕಂಪನಿಗಳು, ಗಣಿಧಣಿಗಳು, ವಿವಿಧ ಟ್ರಸ್ಟ್ಗಳು, ಶೈಕ್ಷಣಿಕ ಸಂಸ್ಥೆಗಳು, ರಿಯಲ್ ಎಸ್ಟೇಟ್, ಮೀನುಗಾರಿಕೆ ಮತ್ತು ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ತೆರಿಗೆ ವಂಚನೆ ಸಂಬಂಧಿತವಾಗಿ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ಸಂಘಟಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದಾಳಿಗಳ ವೇಳೆ ದಾಳಿಗೊಳಗಾದವರೆಲ್ಲರೂ ರಾಜಕೀಯ ಪ್ರಭಾವ ಹೊಂದಿದವರಾಗಿದ್ದರು ಎಂಬುದು ಪತ್ತೆಯಾಗಿದೆ. ಹಾಗೆಂದ ಮಾತ್ರಕ್ಕೆ ಇದು ರಾಜಕೀಯ ಪ್ರೇರಿತ ದಾಳಿಯಲ್ಲ. ಆದಾಯ ತೆರಿಗೆ ಇಲಾಖೆಯು ಅತ್ಯಂತ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಈ ವಿಷಯವನ್ನು ರಾಜಕೀಯಕರಣಗೊಳಿಸದಂತೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
Income tax commissioner,clarification,IT Raid