ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ-ಮುಖ್ಯಮಂತ್ರಿ ಕುಮಾರಸ್ವಾಮಿ

ಮೈಸೂರು, ಮಾ.28- ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ಜೆಡಿಎಸ್ ಪಕ್ಷವನ್ನು ಹೆದರಿಸುವ ಪ್ರಯತ್ನದ ಮೂಲಕ ಲೋಕಸಭೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಐಟಿ ದಾಳಿ ಮೂಲಕ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗುಡುಗಿದರು.

ತಾವು ಕಾನೂನು ರೀತಿ ಹೋರಾಟಕ್ಕೆ ತಯಾರಾಗಿದ್ದೇವೆ ಎಂದ ಅವರು ಮುಖ್ಯಮಂತ್ರಿ ಮನೆ ಬಾಗಿಲು 24 ಗಂಟೆಯೂ ಬಾಗಿಲು ತೆರೆದಿರುತ್ತದೆ, ದಾಳಿ ಮಾಡಲಿ ಎಂದರು.

ನ್ಯಾಯಾಲಯದ ಆದೇಶವಿಲ್ಲದೆ ಮುಖ್ಯಮಂತ್ರಿ ಮನೆ ಮೇಲೆ ದಾಳಿ ಮಾಡಲು ಬರುವುದಿಲ್ಲ ಎಂಬುದು ತಮಗೂ ಗೊತ್ತಿದೆ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆ ನಿರ್ದೇಶಕರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ. ಅವರಿಗೆ ಸಂವಿಧಾನಿಕ ಹುದ್ದೆ ನೀಡುವ ಭರವಸೆ ನೀಡಲಾಗಿದೆ ಎಂದು ಆರೋಪಿಸಿದರು.

ಆದಾಯ ತೆರಿಗೆ ಇಲಾಖೆ ನಿರ್ದೇಶಕರನ್ನು ಬದಲಾವಣೆ ಮಾಡಿ ನಿಷ್ಪಕ್ಷಪಾತ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಹಾಸನ, ಮಂಡ್ಯ, ಕನಕಪುರ, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಮಾತ್ರ ಏಕೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿದೆ. ಬೇರೆಲ್ಲೂ ಇಲ್ಲವೇ ಎಂದು ಪ್ರಶ್ನಿಸಿದ ಅವರು ಜೆಡಿಎಸ್‍ಗೆ ಭಯ ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಐಟಿ ದಾಳಿ ಸಂದರ್ಭದಲ್ಲಿ ರಾಜ್ಯ ಪೊಲೀಸರ ಸಹಕಾರ ಪಡೆಯಲಾಗುತ್ತಿತ್ತು. ಆದರೆ, ಸಿಆರ್‍ಪಿಎಫ್ ಭದ್ರತೆಯಲ್ಲಿ ದಾಳಿ ನಡೆಸಲಾಗಿದೆ. ಕೇಂದ್ರ ಸರ್ಕಾರ ತನ್ನ ಅಧೀನದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ನೀಚನತನದ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಒಬ್ಬ ವ್ಯಕ್ತಿ ಮಾಹಿತಿ ಸಂಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸುತ್ತಾರೆ. ಆನಂತರ ದಾಳಿ ನಡೆಯುತ್ತಿದೆ ಎಂದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರವಿಲ್ಲವೆ? ರಕ್ಷಣೆಗೆ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದ ಅವರು, ವಿಧಾನಸೌಧದ ಬಳಿ ದೊರೆತ ಹಣ ಯಾರದ್ದೆಂಬುದು ಎಂಬ ಮಾಹಿತಿಯನ್ನು ಇದುವರೆಗೂ ಏಕೆ ಕೊಟ್ಟಿಲ್ಲ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ದೊರೆತಿರಲಿಲ್ಲವೆ? ಪ್ರಾಮಾಣಿಕತೆ ಬಗ್ಗೆ ನಮಗೆ ಬುದ್ಧಿ ಹೇಳುವ ಪ್ರಯತ್ನ ಮಾಡಬೇಕಿಲ್ಲ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ಐಟಿ ದಾಳಿ ಮೂಲಕ ಮಂಡ್ಯದ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂಬುದು ಕನಸಿನ ಮಾತು. ಚುನಾವಣೆ ಮೇಲೆ ಈ ದಾಳಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ