ಸಚಿವ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಆದಾಯ ತೆರಿಗೆ ದಾಳಿ, ಇದು ಸಂಪೂರ್ಣ ರಾಜಕೀಯ ಪ್ರೇರಿತ -ಡಿಸಿಎಂ. ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾ.28-ಚುನಾವಣೆ ಸಂದರ್ಭದಲ್ಲೂ ಆದಾಯ ತೆರಿಗೆ ಇಲಾಖೆಯನ್ನು ಬಿಜೆಪಿಯವರು ದುರುಪಯೋಗ ಪಡಿಸಿಕೊಂಡು ರಾಜಕೀಯ ಕಾರಣಕ್ಕಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಮನೆ ಮೇಲೆ ಈವರೆಗೂ ಒಂದೇ ಒಂದು ಆದಾಯ ತೆರಿಗೆ ದಾಳಿ ನಡೆದಿಲ್ಲ. ಜೆಡಿಎಸ್ ಹಾಗೂ ಮುಖ್ಯಮಂತ್ರಿ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಲಿದೆ ಎಂದು ಗುಪ್ತಚರ ಇಲಾಖೆ ಎರಡು-ಮೂರು ದಿನಗಳ ಹಿಂದೆ ಮಾಹಿತಿ ನೀಡಿತ್ತು. ಅದು ನಿಜವಾಗಿದೆ. ಇಂದು ಆದಾಯ ತೆರಿಗೆ ಇಲಾಖೆ ಸಚಿವ ಸಿ.ಎಸ್.ಪುಟ್ಟರಾಜು ಮನೆ ಮೇಲೆ ದಾಳಿ ನಡೆಸಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರ ಮನೆ ಮೇಲೆ ನಿರಂತರ ದಾಳಿ ನಡೆದಿದೆ. ಲೋಕಸಭಾ ಚುನಾವಣೆ ವೇಳೆಯೂ ಆದಾಯ ತೆರಿಗೆ ಅಸ್ತ್ರವನ್ನೇ ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದರು.

ಐಟಿ ಇಲಾಖೆಗೆ ದಾಳಿ ನಡೆಸುವ ಸ್ವತಂತ್ರ ಇದೆ. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಅದೇ ರೀತಿ ಬಿಜೆಪಿ ನಾಯಕರ ಮನೆ ಮೇಲೂ ಏಕೆ ದಾಳಿಯಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದೆ.ಇದನ್ನು ನಾವು ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಎಷ್ಟೇ ದಾಳಿ ನಡೆಸಿದರೂ ನಾವು ಹೆದರುವುದಿಲ್ಲ. ಕಾರ್ಯಕರ್ತರು, ಮುಖಂಡರು ಇನ್ನಷ್ಟು ಬಲಗೊಳ್ಳುತ್ತಾರೆ.ಜನ ನಮ್ಮ ಪರವಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ