ತುಮಕೂರು, ಮಾ.28-ಮಾಜಿ ಪ್ರಧಾನಿ ಅವರಿಗೆ ಮತ ಹಾಕುವುದೇ ನಮ್ಮ ಸೌಭಾಗ್ಯ ಎಂದು ಜನ ಭಾವಿಸಿದ್ದಾರೆ. ನಮ್ಮ ಬಳಿ ಹಣ ಇಲ್ಲ, ಐಟಿ-ಬಿಟಿ ಕಂಪನಿಗಳಿಲ್ಲ. ಇರೋದು ರೈತರಷ್ಟೆ. ದೇವೇಗೌಡರ ಬಗ್ಗೆ ಮಾತನಾಡಲು ಸೋಮಣ್ಣ ಯಾರು? ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಶಾಸಕ ಗೌರಿಶಂಕರ್ ಗುಡುಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಣದಿಂದ ಗೆಲ್ಲುತ್ತಾರೆ ಎಂಬ ಬಿಜೆಪಿಗೆ ತಿರುಗೇಟು ನೀಡಿ ಜಿಲ್ಲೆಯ ಚಿತ್ರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಸೋಮಣ್ಣ ಅವರು ಯಾವ ತಾಲೂಕುಗಳಿಗೆ ಭೇಟಿ ಕೊಟ್ಟಿದ್ದಾರೆ. ಸಿದ್ದಗಂಗಾ ಮಠಕ್ಕೆ ಬಂದು-ಹೋಗುವುದು ಬಿಟ್ಟರೆ ಇವರ ಕೊಡುಗೆ ಏನು ಎಂದು ಹರಿಹಾಯ್ದರು.
ಮಾಜಿ ಪ್ರಧಾನಿಯವರ ಕೊಡುಗೆ ಏನೆಂಬುದು ಮತದಾರರಿಗೆ ಗೊತ್ತಿದೆ. ಫಲಿತಾಂಶ ಪ್ರಕಟವಾಗುವ ದಿನ ಯಾರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವರೋ ತಿಳಿಯದು.ಎರಡೂ ಪಕ್ಷಗಳಲ್ಲಿರುವ ಬಂಡಾಯಗಳು ಶಮನವಾಗುತ್ತವೆ. ಮಾಜಿ ಪ್ರಧಾನಿ ದೇವೇಗೌಡರು ಗೆದ್ದೇ ಗೆಲ್ಲುತ್ತಾರೆ.ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ಹಾಗೂ ಯಾರ್ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂಬುದರ ಕುರಿತು ಚರ್ಚಿಸಲಾಗಿದೆ.
ದೇವೇಗೌಡರು ಏ.3 ಅಥವಾ 4 ರಂದು ಪ್ರಚಾರಕ್ಕೆ ಜಿಲ್ಲೆಗೆ ಬರಲಿದ್ದಾರೆ. ರಾಜಣ್ಣ ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅವರು ದೊಡ್ಡವರು ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಬೇರೆಯವರ ಮೇಲೆ ಆರೋಪ ಮಾಡುವುದಕ್ಕಿಂತ ಮೊದಲು ನಾವು ಸರಿ ಇದ್ದೇವೆಯೇ ಎಂಬುದನ್ನು ನೋಡಿಕೊಳ್ಳಬೇಕು.ಅನಗತ್ಯ ಮಾತುಗಳು ಬೇಡ. ಇಂತಹ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ ಎಂದು ರಾಜಣ್ಣ ವಿರುದ್ಧ ಕಿಡಿಕಾರಿದರು.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ವಿಜ್ಞಾನಿಗಳ ಸಾಧನೆ ಹೆಮ್ಮೆಯ ವಿಚಾರ. ನಮ್ಮ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದನ್ನು ವಿಜ್ಞಾನಿಗಳು ತೋರಿಸಿದ್ದಾರೆ.ಸ್ಯಾಟ್ಲೈಟ್ಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳನ್ನು ತಯಾರು ಮಾಡಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು.ಈ ಬಗ್ಗೆ ಬಹಳ ವರ್ಷಗಳಿಂದ ವಿಜ್ಞಾನಿಗಳು ಸಂಶೋಧನೆ ನಡೆಸಿಕೊಂಡು ಬಂದಿದ್ದಾರೆ.ಈಗ ಅದು ಯಶಸ್ವಿಯಾಗಿರುವುದರಿಂದ ಸಂದೇಶ ಇಡೀ ವಿಶ್ವಕ್ಕೆ ರವಾನೆಯಾಗಿದೆ ಎಂದರು.
ಮೊದಲ ಹಂತದ ಪ್ರಚಾರ ಏ.4 ಮತ್ತು 5 ರಂದು ನಡೆಯಲಿದೆ.ಒಟ್ಟು 4 ಅಥವಾ 6 ದಿನಗಳ ಪ್ರಚಾರವಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಮುಖಂಡರು ತೆರಳಿ ಪ್ರಚಾರ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.