ಬೆಂಗಳೂರು,ಮಾ.28-ರಾಜ್ಯದ ವಿವಿಧೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ಷೇಪಿಸಿದ್ದಾರೆ.
ಐಟಿ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುತ್ತಾರೆ. ಯಾರ ಮೇಲೆ ಅನುಮಾನವಿರುತ್ತದೆಯೋ ಅಂಥವರ ಮೇಲೆ ದಾಳಿ ಮಾಡಲಾಗುತ್ತದೆ. ತಪ್ಪನ್ನೇ ಮಾಡಿಲ್ಲ ಎಂದಾಗ ಇವರು ಹೆದರುವುದು ಏಕೆ ಎಂದು ಪ್ರಶ್ನಿಸಿದರು.
ತಮಗಿರುವ ಮಾಹಿತಿಯ ಖಚಿತ ಆಧಾರದ ಮೇಲೆ ದಾಳಿ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ ತಪ್ಪು ಮಾಡೇ ಇಲ್ಲ ಎಂದ ಮೇಲೆ ಭಯಪಡಬೇಕಾದ ಅಗತ್ಯವಿಲ್ಲ. ಇನ್ನು ಇಂತಿಷ್ಟೇ ಸಮಯದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂಬ ಮಾಹಿತಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮುಂಚಿತವಾಗಿಯೇ ಗೊತ್ತಾಗುತ್ತದೆ. ಅವರಿಗೆ ಈ ಮಾಹಿತಿಯನ್ನು ಕೊಟ್ಟವರ್ಯಾರು ಎಂದು ಪ್ರಶ್ನಿಸಿದರು.
ದಾಳಿ ನಡೆಯುವ ಮುನ್ನವೇ ಮಾಹಿತಿ ಸಿಎಂಗೆ ತಲುಪುತ್ತದೆ ಎಂದರೆ ಅಲ್ಲಿಗೆ ಮೊದಲೇ ಬಂದೋಬಸ್ತ್ ಮಾಡಿಕೊಂಡಿರುತ್ತಾರೆ. ಅಧಿಕಾರಿಗಳಿಗೆ ಇನ್ನು ಸಿಗುವುದಾದರೂ ಏನು ಎಂದು ವ್ಯಂಗ್ಯವಾಡಿದರು.
ಐಟಿ ದಾಳಿಗೆ ಸುಮಲತಾ ಕಾರಣ ಎಂಬ ಸಚಿವ ಪುಟ್ಟರಾಜು ಅವರ ಹೇಳಿಕೆ ವಿರುದ್ದ ಕಿಡಿಕಾರಿದ ಯಡಿಯೂರಪ್ಪ , ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರಿಗೆ ಇಂಥ ಹೇಳಿಕೆ ಶೋಭೆ ತರುವುದಿಲ್ಲ. ಸಚಿವ ಸ್ಥಾನದಲ್ಲಿದ್ದುಕೊಂಡು ಇಂತಹ ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಗೆ ನಿನ್ನೆ ರಾತ್ರಿಯೇ ಈ ಬಗ್ಗೆ ಮಾಹಿತಿ ಇತ್ತು ಎನ್ನುವುದಾದರೆ ಅವರು ಮೊದಲು ಬಂದೋಬಸ್ತ್ ಮಾಡಿಕೊಂಡಿದ್ದಾರೆ ಎಂಬ ಅನುಮಾನವಿದೆ.ಸುಖಾಸುಮ್ಮನೆ ಐಟಿ, ಇಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳ ಮೇಲೆ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.