ಬೆಂಗಳೂರು, ಮಾ.27-ಉಪಗ್ರಹ ಉಡಾಯಿಸುವ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿರುವುದು ಮೋದಿಯವರ ಸಾಧನೆಯಲ್ಲ, ಅದು ವಿಜ್ಞಾನಿಗಳ ಸತತ ಪರಿಶ್ರಮದ ಫಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಟಾಂಗ್ ನೀಡಿದ್ದಾರೆ.
ಇಂದು ಮೋದಿಯವರು ತುರ್ತು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಾಧನೆ ಹೇಳಿಕೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಷಯವನ್ನು ಮರೆಮಾಚಬಾರದು.ಯುದ್ಧ ಸಾಮಗ್ರಿಗಳ ವಿಷಯದಲ್ಲಿ ರಾಜಕಾರಣ ಬೆರೆಸಬಾರದು.ದೇಶ ರಕ್ಷಣೆಯಲ್ಲಿ ಸೇನೆ ಮತ್ತು ವಿಜ್ಞಾನಿಗಳ ಸೇವೆ ಅಮೂಲ್ಯವಾದುದು. ಹಗಲಿರುಳು ದುಡಿಯುವ ಅವರ ಸಾಧನೆಯನ್ನು ತಮ್ಮ ಸಾಧನೆ ಎಂದುಕೊಳ್ಳುವುದು ಪ್ರಧಾನಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ತುಮಕೂರಿನಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಈಗಾಗಲೇ ಮಾತುಕತೆ ನಡೆಸಲಾಗಿದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಾವು ಕಾಂಗ್ರೆಸ್ ಪಕ್ಷಕ್ಕೆ ಬದ್ಧರಾಗಿದ್ದು, ಪಕ್ಷಕ್ಕೆ ಹಾನಿಯಾಗುವಂತಹ ಯಾವುದೇ ವ್ಯತಿರಿಕ್ತ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಮುದ್ದಹನುಮೇಗೌಡರ ಜೊತೆ ನಾನೂ ಮಾತುಕತೆ ನಡೆಸಿದ್ದೇನೆ. ಎಲ್ಲವೂ ಸುಖಾಂತ್ಯವಾಗಲಿದೆ.ಮೈತ್ರಿ ಅಭ್ಯರ್ಥಿ ದೇವೇಗೌಡರು ಗೆದ್ದೇ ಗೆಲ್ಲುತ್ತಾರೆ ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.