
ಲಂಡನ್, ಮಾ.27- ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರು ಬಳಸುತ್ತಿದ್ದ ಬೆಳ್ಳಿಗನ್ 60,000 ಗ್ರೇಟ್ ಬ್ರಿಟನ್ ಪೌಂಡ್ಗಳಿಗೆ (ಸುಮಾರು 82ಲಕ್ಷ ರೂ.ಗಳಿಗೆ ) ಇಂಗ್ಲೆಂಡ್ನಲ್ಲಿ ಹರಾಜಾಗಿದೆ.
ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಸ್ತ್ರಗಳು ಇಂದಿಗೂ ಭಾರೀ ಮೌಲ್ಯ ಹೊಂದಿವೆ ಎಂಬುದಕ್ಕೆ ಇದು ಮತ್ತೊಂದು ಸ್ಪಷ್ಟ ನಿರ್ದಶನವಾಗಿದೆ.
ಇಂಗ್ಲೆಂಡ್ ರಾಜಧಾನಿ ಲಂಡನ್ನಲ್ಲಿ ನಡೆದ ಪ್ರತಿಷ್ಠಿತ ಹರಾಜು ಪ್ರಕ್ರಿಯೆಯಲ್ಲಿ ಟಿಪ್ಪುಸುಲ್ತಾನ್ರ ಶಸ್ತ್ರಾಸ್ತ್ರ ಸಂಗ್ರಹಗಳನ್ನು ಬಿಕರಿ ಮಾಡಲಾಯಿತು.
ಮೈಸೂರು ಹುಲಿಯ ಶಸ್ತ್ರಾಸ್ತ್ರ ಕೋಠಿಯಲ್ಲಿನ ಅಸ್ತ್ರಗಳು ಒಟ್ಟು 107,000ಪೌಂಡುಗಳಿಗೆ (ಸುಮಾರು 5.52ಕೋಟಿ ರೂ.ಗಳು) ಮಾರಾಟವಾಗಿವೆ.
ಈ ಶಸ್ತ್ರಾಸ್ತ್ರಗಳಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ಬೆಳ್ಳಿ ಹಿಡಿಕೆ ಹೊಂದಿರುವ 20-ಬೋರ್ ಪ್ಲಿಂಟ್ಲಾಕ್ ಗನ್ 14 ಬಿಡ್ಡುದಾರರನ್ನು ಆಕರ್ಷಿಸಿತು. ಹರಾಜು ಪ್ರಕ್ರಿಯೆಯಲ್ಲಿ ಅಂತಿಮವಾಗಿ ಈ ಅಮೂಲ್ಯ ಶಸ್ತ್ರಾಸ್ತ್ರ 60,000 ಪೌಂಡಗಳಿಗೆ ಹರಾಜಾಯಿತು.
ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಬಹುತೇಕ ಶಸ್ತ್ರಾಸ್ತ್ರಗಳು ಹಾನಿಗೀಡಾಗಿವೆ. ಆದರೆ ಕೆಲವು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ಅವುಗಳಲ್ಲಿ ಈ ಬೆಳ್ಳಿ ಗನ್ ಕೂಡ ಒಂದು. ಟಿಪ್ಪು ಇದನ್ನು ವೈರಿಗಳ ವಿರುದ್ಧ(ಬ್ರಿಟಿಷರು) ಬಳಸಿದ್ದರು. ಇದು ಉತ್ತಮ ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಹರಾಜು ನಂತರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀರಂಗಪಟ್ಟಣದಲ್ಲಿ 1799ರಲ್ಲಿ ನಡೆದ ನಿರ್ಣಾಯಕ ಹೋರಾಟದಲ್ಲಿ ಮೈಸೂರು ಹುಲಿ ಬ್ರಿಟಿಷರ ವಿರುದ್ಧ ಪರಾಭವಗೊಂಡರು ನಂತರ ಅವರ ಶಸ್ತ್ರಾಸ್ತ್ರಗಳು ಮತ್ತು ಟಿಪ್ಪು ಸೇನೆ ಅಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿವೆ.