ಬೆಂಗಳೂರು, ಮಾ.27-ಚುನಾವಣೆ ಸಂದರ್ಭದಲ್ಲಿ ಸುಳ್ಳನ್ನೇ ಸತ್ಯ ಮಾಡುವಂತಹ ಅಬ್ಬರದ ಪ್ರಚಾರಗಳು ವ್ಯಾಪಕವಾಗಿರುತ್ತವೆ. ಕಾಂಗ್ರೆಸ್ ಕಾರ್ಯಕರ್ತರು ಸುಳ್ಳು ಪ್ರಚಾರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿರಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಕರೆ ನೀಡಿದರು.
ನಗರದಲ್ಲಿಂದು ನಡೆದ ಪ್ರಚಾರ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ದುರುದ್ದೇಶದಿಂದ ಸುಳ್ಳು ವದಂತಿಗಳನ್ನು ಹಬ್ಬಿಸುವುದು, ಅಸತ್ಯವನ್ನು ಪ್ರಚಾರ ಮಾಡುವುದು ವ್ಯಾಪಕಗೊಳ್ಳುತ್ತಿದೆ. ಕಳೆದ ಏಳೆಂಟು ವರ್ಷಗಳ ಈಚೆಗೆ ಬಿಜೆಪಿ ಸುಳ್ಳು ಪ್ರಚಾರದ ಮೂಲಕವೇ ಯುವಕರನ್ನು ಆಕರ್ಷಿಸುತ್ತಿದೆ. 60 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬ ಪ್ರಶ್ನೆಗೆ ನಾವು ತಕ್ಕ ಉತ್ತರ ನೀಡಬೇಕಿದೆ ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ಗುಂಡಿಗೆ ಎದೆ ಕೊಟ್ಟು ಹೋರಾಡಿದ ಕಾಂಗ್ರೆಸ್ ಅಂದಿನಿಂದ ಇಂದಿನವರೆಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದೆ. ಭಾರತವನ್ನು ಇಂದು ವಿಶ್ವಮಾನ್ಯ ರಾಷ್ಟ್ರಗಳಲ್ಲಿ ಗುರುತಿಸುತ್ತಿರುವುದಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ.ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವೀಕರಿಸುವ ಪ್ರಚಾರದ ವಿರುದ್ಧ ನಾವು ಹೋರಾಟ ಮಾಡಬೇಕು ಯುವಕರು ಬಿಜೆಪಿ ಸುಳ್ಳಿಗೆ ಹೆಚ್ಚು ಮರಳಾಗುತ್ತಿರುವುದು ವಿಷಾದ.ಅವರಿಗೆ ಸತ್ಯಾಂಶ ತಿಳಿಸಿ ಕಾಂಗ್ರೆಸ್ನ ಸಾಧನೆಗಳನ್ನು ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಕಾಂಗ್ರೆಸ್ಗೆ ಹೆಚ್ಚು ಮತ ಬರುವಂತೆ ನಾವುಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.