ಕೊಳ್ಳೆಗಾಲ, ಮಾ.27- ಚಾಮರಾಜನಗರದಲ್ಲಿ 2019ರ ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಂಸದ ಆರ್. ಧ್ರುವನಾರಾಯಣ್, ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ಮುತ್ಸದಿ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಬಿಎಸ್ಪಿ ಅಭ್ಯರ್ಥಿಯಾಗಿ ಸಂಶೋಧಕ ಡಾ.ಶಿವಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ.
ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಕಳೆಗುಂದಿದ್ದ ರಾಜಕೀಯ ಚಟುವಟಿಕೆ ಗರಿಗೆದರಿದ್ದು ದಿನದಿಂದ ದಿನಕ್ಕೆ ರಂಗು ಪಡೆದು ಕೊಳ್ಳುತ್ತಿದೆ.ಮೂರು ಪಕ್ಷಗಳ ಕಾರ್ಯಕರ್ತರು ಮತ ಬೇಟೆ, ಅಬ್ಬರದ ಪ್ರಚಾರ, ವಾಕ್ಸಮರ ಹೀಗೆ ಚುನಾವಣಾ ಅಖಾಡ ರಂಗೇರಿಸಿ ಕ್ಷೇತ್ರದ ರಾಜಕೀಯ ಸಂಪೂರ್ಣ ಚಿತ್ರಣವನ್ನು ಬದಲಾಯಿಸುತ್ತಿದ್ದಾರೆ.ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಚುನಾವಣಾ ಕಾವು ಏರತೊಡಗಿದೆ. ಟೀ ಅಂಗಡಿ, ನಾಲ್ಕು ಜನ ಸೇರುವ ಕಡೆ ರಾಜಕೀಯ ಲೆಕ್ಕಚಾರಗಳು ಶುರುವಾಗಿವೆ. ಪಾರ್ಟಿ ಆಫೀಸ್ಗಳಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.
ಈಗಾಗಲೆ 2 ಬಾರಿ ಜಯಗಳಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್,ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಶಾಸಕರುಗಳಾದ ನರೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಮಾಜಿ ಶಾಸಕರುಗಳಾದ ಎಸ್.ಜಯಣ್ಣ, ಎ.ಆರï.ಕೃಷ್ಣಮೂರ್ತಿ, ಆರ್.ಬಾಲರಾಜï, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಪಕ್ಷದ ಮುಖಂಡರುಗಳು ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಡನೆ ನಾಮಪತ್ರ ಸಲ್ಲಿಸಿದ್ದಾರೆ.
ಹಾಗೇಯೇ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಬಿ.ಎಸ್.ಪಿ ಅಭ್ಯರ್ಥಿ ಸಂಶೋಧಕ ಡಾ.ಶಿವಕುಮಾರ್ರವರು ಪಕ್ಷದ ಮುಖಂಡರುಗಳು ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಡನೆ ನಾಮಪತ್ರ ಸಲ್ಲಿಸಲಿದ್ದಾರೆ.
ಒಟ್ಟಿನಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದಿನಂದಿನಕ್ಕೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.