![modi](http://kannada.vartamitra.com/wp-content/uploads/2019/02/modi-1-572x381.jpg)
ನವದೆಹಲಿ: ಬಾಹ್ಯಾಕಾಶದಲ್ಲಿ ವಿರೋಧಿ ಉಪಗ್ರಹ ಕ್ಷಿಪಣಿಯನ್ನು ಕೇವಲ ಮೂರು ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಇಂದು ಭಾರತ ಸೇರಿದೆ ಎಂದು ಪ್ರಧಾನಿ ಘೋಷಿಸಿದರು. ಜಾಗತಿಕವಾಗಿ ಭಾರತ ಬಾಹ್ಯಾಕಾಶ ಶಕ್ತಿಯಲ್ಲಿ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.
ಈವರೆಗೂ ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಧನೆ ಮಾಡುವ ಮೂಲಕ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.
ಭಾರತ ಇಂದು ‘ಗ್ರೇಟ್ಸ್ ಆಫ್ ದಿ ಸ್ಪೇಸ್ ರೇಸ್’ನಲ್ಲಿ ತನ್ನ ಹೆಸರನ್ನು ಯಶಸ್ವಿಯಾಗಿ ನೋಂದಾಯಿಸಿಕೊಂಡಿದೆ. ‘ಮಿಷನ್ ಶಕ್ತಿ’ ಯೋಜನೆ ಬೃಹತ್ ಮಟ್ಟದಲ್ಲಿ ಯಶಸ್ವಿಯಾಗಿದೆ. ಈ ಯೋಜನೆಯಲ್ಲಿ ಪಾಲುದಾರರಾದ ಇಸ್ರೋದ ಎಲ್ಲ ವಿಜ್ಞಾನಿಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದು ದೇಶದ ಅತಿ ದೊಡ್ಡ ಸಂತಸದ ಕ್ಷಣ. ಎಲ್ಲರೂ ಹೆಮ್ಮೆ ಪಡಬೇಕಾದ ಸಮಯ. ಈಗ ನಾವು ನಮ್ಮ ಭೂಮಿ, ಗಾಳಿ ಮತ್ತು ನೀರನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯದ ಜೊತೆಗೆ ಬಾಹ್ಯಾಕಾಶದಲ್ಲೂ ರಕ್ಷಣಾ ಸಾಮರ್ಥ್ಯದಲ್ಲಿ ಸೈ ಎನಿಸಿಕೊಂಡಿದ್ದೆವೆ. ಬಾಹ್ಯಾಕಾಶದಲ್ಲಿ 300 ಕಿ.ಮೀ. ದೂರದಲ್ಲಿರುವ ಕಡಿಮೆ ಕಕ್ಷೆಯ ಉಪಗ್ರಹದ ಮೂಲಕ ಶತ್ರುಗಳ ಉಪಗ್ರಹ ಕ್ಷಿಪಣಿಯನ್ನು ಮೂರು ನಿಮಿಷದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಇದೀಗ ನಮಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲ ವಿಜ್ಞಾನಿಗಳಿಗೂ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.