ಕರಾಚಿ, ಮಾ.27- ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಿ ಬಲವಂತವಾಗಿ ಮದುವೆ ಮಾಡಿಸಿ ಅನೇಕ ರಾಷ್ಟ್ರಗಳಿಂದ ಛೀಮಾರಿ ಹಾಕಿಸಿಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿರುವ ಪಾಕ್ನಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಬಾಲಕಿಯರ ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿಸಿದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಅದೇ ಸಿಂಧ್ ಪ್ರಾಂತ್ಯದಲ್ಲಿ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಬಾಲಕಿಯನ್ನು ಅಪಹರಿಸಲಾಗಿದ್ದು, ಬಲವಂತದ ಮತಾಂತರ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಮೂಲಗಳ ಪ್ರಕಾರ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಟಾಂಗೋ ಬಾಘೋ ಪ್ರದೇಶದ ಮೇಘವಾರ್ ಹಿಂದೂ ಸಮುದಾಯಕ್ಕೆ ಸೇರಿದ 16 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಲಾದ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಆದರೆ, ಯಾವಾಗ ಕಿಡ್ನಾಪ್ ಆಗಿದೆ ಎಂಬುದು ಗೊತ್ತಾಗಿಲ್ಲ.
ಅಪಹೃತ ಬಾಲಕಿಯ ತಂದೆಯು ಬದಿನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸದಾರ್ರ ಹಸನ್ ನಿಯಾಜಿ ಅವರ ಬಳಿ ಹೋಗಿ ದೂರು ದಾಖಲಿಸಿದ್ದಾರೆ. ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹರಿರಾಮ್ ಕಿಶೋರಿ ಲಾಲ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.