ಝೆಗ್ರೆಬ್(ಕ್ರೊವೇಷಿಯಾ), ಮಾ.27-ತನ್ನ ರಕ್ಷಣೆ ಮತ್ತು ಸುರಕ್ಷತೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಭಾರತ ಕೈಗೊಳ್ಳಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಾರಿದ್ದಾರೆ.
ಕ್ರೊವೇಷಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಝೆಗ್ರೆಬ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಪುಲ್ವಾಮಾ ಉಗ್ರರ ದಾಳಿ ನಂತರ ಪಾಕಿಸ್ತಾನ ಬಾಲಾಕೋಟ್ನಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆದ ಭಾರತೀಯ ವಾಯು ಪಡೆಯ ದಾಳಿಯನ್ನು ಉಲ್ಲೇಖಿಸಿದರು.
ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ದೇಶದ ಜನರಿಗೆ ಭದ್ರತೆ ನೀಡಲು ನಾವು ಅಗತ್ಯವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಕೋವಿಂದ್ ಹೇಳಿದರು.
ಮನುಕುಲದ ಸೌಖ್ಯತೆಯನ್ನು ಪೋಷಿಸಲು ಶಾಂತಿ ಮತ್ತು ಭದ್ರತೆ ಮಹತ್ವದ ಸಂಗತಿಗಳಾಗಿವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಚಲ ಬೆಂಬಲ ನೀಡುತ್ತಿರುವುದಕ್ಕಾಗಿ ಕ್ರೊವೇಷಿಯಾ ಸರ್ಕಾರಕ್ಕೆ ರಾಷ್ಟ್ರಪತಿ ಕೃತಜ್ಞತೆ ಸಲ್ಲಿಸಿದರು. ಕ್ರೊವೇಷಿಯಾ ಜೊತೆ ಎಲ್ಲ ಕ್ಷೇತ್ರಗಳಲ್ಲೂ ಉತ್ಮ ಸಂಬಂಧ ಹೊಂದುವುದು ಭಾರತದ ಅದ್ಯತೆಯಾಗಿದೆ ಎಂದು ಕೋವಿಂದ್ ಇದೇ ಸಂದರ್ಭದಲ್ಲಿ ನುಡಿದರು.
ನಿನ್ನೆ ಸಂಜೆ ಕ್ರೊವೇಷಿಯಾಗೆ ತಮ್ಮ ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ಆಗಮಿಸಿದ ರಾಷ್ಟ್ರಪತಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಭಾರತದ ಅತ್ಯುನ್ನತ ನಾಯಕರೊಬ್ಬರು ಕ್ರೊವೇಷಿಯಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.