ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಸ್ತಿಯ ವಶ-ಬಿಬಿಎಂಪಿ ಆಯುಕ್ತರಿಗೆ ಆದೇಶ ನೀಡಿದ ನ್ಯಾಯಾಲಯ

ಬೆಂಗಳೂರು, ಮಾ.27-ಕೆಲ ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದ 40 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿದೆ.

ನಗರದ ಹೃದಯ ಭಾಗದಲ್ಲಿರುವ ಪಾಲಿಕೆ ಆಸ್ತಿಯನ್ನು ಮಾಜಿ ಸಚಿವ ರೋಷನ್ ಬೇಗ್ ಅವರು ಅತಿಕ್ರಮಣ ಮಾಡಿಕೊಂಡು ಆ ಜಾಗದಲ್ಲಿ ಡ್ಯಾನಿಷ್ ಪಬ್ಲಿಕೇಷನ್ ತೆರೆದಿದ್ದಾರೆ ಎಂದು ನಗರ ಜಿಲ್ಲಾ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ್ದ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಎ.ವಿಜಯನ್ ಅವರು ವಾದ-ವಿವಾದವನ್ನು ಕೈಗೆತ್ತಿಕೊಂಡಿದ್ದರು.

ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಅತಿಕ್ರಮಣ ಮಾಡಿಕೊಂಡಿದ್ದ ಪ್ರದೇಶದ ಮಾಲೀಕತ್ವ ಪಾಲಿಕೆಗೆ ಸೇರಿದ್ದು ಎಂಬ ಮಹತ್ವದ ತೀರ್ಪು ನೀಡಿದ್ದು ಈ ಕೂಡಲೇ ಅತಿಕ್ರಮಣ ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಬೃಹತ್ ಸರ್ಕಾರಿ ಭೂ ಕಬಳಿಕೆ ಹಗರಣವನ್ನು ದಾಖಲೆ ಸಮೇತ ಬಯಲಿಗೆಳೆದಿದ್ದ ಎನ್.ಆರ್.ರಮೇಶ್ ಅವರು ಮಾಜಿ ಸಚಿವ ರೋಷನ್ ಬೇಗ್ ಪಾಲಿಕೆಯ ಶಿವಾಜಿ ನಗರ ವಿಭಾಗದ ಕಂದಾಯಾಧಿಕಾರಿಗಳ ವಿರುದ್ಧ ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.ಮಾತ್ರವಲ್ಲ ಹಗರಣ ಕುರಿತಂತೆ ಎಸಿಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ