ಕೊಪ್ಪಳ,ಮಾ.27- ಕೊಪ್ಪಳದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡದೆ ಮೀನಾಮೇಷ ಎಣಿಸುತ್ತಿರುವ ಬಿಜೆಪಿ ಧೋರಣೆಗೆ ಇಲ್ಲಿನ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಹಾಲಿ ಸಂಸದರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ತುಂಬಾ ನಷ್ಟವಾಗುತ್ತದೆ.ನಾಲ್ಕು ಶಾಸಕರು, ಒಂದು ಬಾರಿ ಸಂಸದರೂ ಆಗಿರುವ ಕರಡಿ ಸಂಗಣ್ಣನವರಿಗೆ ಇನ್ನೂ ಟಿಕೆಟ್ ಘೋಷಣೆ ಮಾಡದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬಹುತೇಕ ಎಲ್ಲಾ ಹಾಲಿ ಸಂಸದರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಲಾಗಿದೆ.ಕೊಪ್ಪಳ ಕ್ಷೇತ್ರದ ಸಂಸದರಿಗೆ ಮಾತ್ರ ಏಕೆ ಟಿಕೆಟ್ ನೀಡಿಲ್ಲ. ಗೆಲ್ಲುವ ಸಾಧ್ಯತೆಯಿದ್ದರೂ ಕೂಡಾ ಅವರಿಗೆ ಟಿಕೆಟ್ ನೀಡಲು ವಿಳಂಬ ಮಾಡುತ್ತಿರುವ ಕಾರಣವೇನು?ಟಿಕೆಟ್ ಘೋಷಣೆಯಾದರೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬಹುದು. ಆದರೆ ಅನಗತ್ಯವಾಗಿ ಪಕ್ಷ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಲಿ ಸಂಸದರಿಗೆ ಹೊರತು ಪಡಿಸಿ ಬಿಜೆಪಿಯವರು ಬೇರೆಯವರಿಗೆ ಟಿಕೆಟ್ ನೀಡಿದರೆ ನಾವು ಪರ್ಯಾಯವಾಗಿ ಯೋಚನೆ ಮಾಡಬೇಕಾಗುತ್ತದೆ ಎಂದು ಮುಖಂಡರಿಗೆ ಇಲ್ಲಿನ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಕರಡಿ ಸಂಗಣ್ಣ ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ.ಪ್ರಾಮಾಣಿಕವಾಗಿದ್ದಾರೆ.ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಉಳಿಸಿಕೊಂಡಿದ್ದಾರೆ.ಅವರಿಗೆ ಟಿಕೆಟ್ ನೀಡಬೇಕಾಗಿರುವುದು ಪಕ್ಷದ ಧರ್ಮವಾಗಿದೆ ಎಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.
ಈ ಕ್ಷೇತ್ರದಿಂದ ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ.