ಬೆಂಗಳೂರು, ಮಾ.26- ಉಮೇಶ್ ಜಾಧವ್ ಅವರ ರಾಜೀನಾಮೆ ಪ್ರಕರಣದ ನಂತರ ಆಪರೇಷನ್ ಕಮಲಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿದ್ದು, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ತೆರೆಮರೆಯಲ್ಲಿ ಚುರುಕು ಪಡೆದುಕೊಂಡಿದೆ.
ಬಿಜೆಪಿ ತೋರಿಸಿದ ಆಮಿಷಕ್ಕೆ ಕೆಲವು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬೆಂಬಲ ನೀಡಲು ಆಸಕ್ತಿ ತೋರಿಸಿದರಾದರೂ ಪಕ್ಷಾಂತರ ನಿಷೇಧ ಕಾಯ್ದೆಗೆ ಹೆದರಿ ಹಿಂದೇಟು ಹಾಕಿದ್ದರು. ಆದರೂ ಮೊಂಡು ಧೈರ್ಯ ಮಾಡಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ, ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರಡಿ ಸ್ಪೀಕರ್ಗೆ ದೂರು ನೀಡಿ ಈ ನಾಲ್ವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದ್ದರು.
ದೂರು ದಾಖಲಾದ ನಂತರ ಈ ನಾಲ್ಕು ಮಂದಿ ಹೆದರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಿ ತಾವು ಪಕ್ಷದಲ್ಲೇ ಉಳಿಯುತ್ತೇವೆ ಎಂದು ಸಮಜಾಯಿಷಿ ನೀಡಿದ್ದರು.
ಅನಂತರದ ಬೆಳವಣಿಗೆಯಲ್ಲಿ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ನಿನ್ನೆ ಜಾಧವ್ ರಾಜೀನಾಮೆ ವಿಚಾರಣೆ ನಡೆಸಿದ ವೇಳೆ ಸ್ಪೀಕರ್ ರಮೇಶ್ಕುಮಾರ್ ಅವರು ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರ ಇತಿಮಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾಯ್ದೆಯಡಿ ಅನರ್ಹಗೊಳಿಸಿದರೆ ಆ ಅವಧಿಗೆ ಮಾತ್ರ ಸೀಮಿತವಾಗಿ ಅವರನ್ನು ಶಿಕ್ಷಿಸಲು ಸಾಧ್ಯವಾಗುತ್ತದೆ.ಆದರೆ, ಮುಂದೆ ನಡೆಯುವ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂಬ ಕಾನೂನಿನ ಅಂಶಗಳನ್ನು ವಿವರಿಸಿದ್ದಾರೆ. ಹೀಗಾಗಿ ದೂರು ದಾಖಲಾಗಿರುವ ಉಳಿದ ಮೂರು ಮಂದಿ ಶಾಸಕರು ನಿರಾಳವಾದಂತಾಗಿದೆ.
ಅತೃಪ್ತರು ರಾಜೀನಾಮೆ ನೀಡಿದರೆ ಅದನ್ನು ತಡೆಯುವುದು ಇನ್ನು ಮುಂದೆ ಬಹಳ ಕಷ್ಟ.ಹೀಗಾಗಿ ಬಿಜೆಪಿ ಚುನಾವಣೆ ಪ್ರಚಾರ ನೆಪದಲ್ಲಿ ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರನ್ನು ಸಂಪರ್ಕಿಸಲಾರಂಭಿಸಿದೆ.
ಲೋಕಸಭೆ ಚುನಾವಣೆಯ ಭರಾಟೆ ಮುಗಿದ ಬೆನ್ನ ಹಿಂದೆಯೇ ಮತ್ತೆ ಆಪರೇಷನ್ ಕಮಲ ಆರಂಭವಾಗಬಹುದು.ಸರ್ಕಾರ ಅಸ್ಥಿರಗೊಳ್ಳಬಹುದೆಂಬ ಆತಂಕಗಳು ವ್ಯಕ್ತವಾಗುತ್ತಿವೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕಾದರೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಬೇಕು.ಅದು ವಿಚಾರಣೆ ನಡೆದು ತೀರ್ಪು ಹೊರ ಬೀಳುವ ವೇಳೆಗೆ ಶಾಸಕರ ಮುಕ್ಕಾಲು ಭಾಗದ ಅವಧಿಯೇ ಮುಗಿದು ಹೋಗಿರುತ್ತದೆ ಎಂಬ ಅಂಶವನ್ನೂ ನಿನ್ನೆ ಸ್ಪೀಕರ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅತೃಪ್ತ ನಾಲ್ವರು ಶಾಸಕರ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಸದೆ ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರಡಿ ದೂರು ನೀಡಿದ್ದೇಕೆ ಎಂಬ ಪ್ರಶ್ನೆಗಳು ಚರ್ಚೆಗೆ ಒಳಗಾಗುತ್ತಿವೆ.
ಮುಂದಿನ ದಿನಗಳಲ್ಲಿ ಕಾನೂನಿನ ಲೋಪಗಳನ್ನು ಬಳಸಿಕೊಂಡು ಬಿಜೆಪಿ ಆಪರೇಷನ್ ಕಮಲದ ಕಾರ್ಯಾಚರಣೆಗಿಳಿದರೆ ಅದನ್ನು ಪ್ರತಿರೋಧಿಸುವುದು ದೋಸ್ತಿ ಪಕ್ಷಗಳಿಗೆ ಕಷ್ಟದ ಕೆಲಸವಾಗಬಹುದು.
ಹೀಗಾಗಿ ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಅಸ್ಥಿರತೆಗೆ ಸಿಲುಕಲಿದೆ ಎಂಬ ಆತಂಕ ಹೆಚ್ಚಾಗುತ್ತಿದೆ.