ಬೆಂಗಳೂರು, ಮಾ.26- ಲೋಕಸಭೆಯ ಮಹಾಸಮರದ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿದ್ದು, ನಾಮಪತ್ರ ಸಲ್ಲಿಸಿರುವ ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಕಸರತ್ತು ಆರಂಭವಾಗಿದೆ.
ಕಾಂಗ್ರೆಸ್-ಜೆಡಿಎಸ್ ಮಿತ್ರಪಕ್ಷಗಳಿಗೆ ತುಮಕೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಗುಲಿದೆ.
ತುಮಕೂರಿನಲ್ಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಸಿಟ್ಟಾಗಿದ್ದು, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಹಾಲಿ ಸಂಸದರಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣಕ್ಕಿಳಿದಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದೇವೇಗೌಡರ ಬೆಂಬಲಕ್ಕೆ ನಿಂತಿದ್ದು, ಮುದ್ದಹನುಮೇಗೌಡರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.
ಜಿಲ್ಲಾ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರ ಪೈಕಿ ಟಿ.ಬಿ.ಜಯಚಂದ್ರ, ಪರಮೇಶ್ವರ್, ಷಡಕ್ಷರಿ, ಶಫಿ ಅಹಮ್ಮದ್ ಮತ್ತಿತರರು ದೇವೇಗೌಡರಿಗೆ ಬೆಂಬಲವಾಗಿ ನಿಂತಿದ್ದರೆ, ಕೆ.ಎನ್.ರಾಜಣ್ಣ ಹಾಗೂ ಇತರ ಬಂಡಾಯಗಾರರು ಮುದ್ದಹನುಮೇಗೌಡರಿಗೆ ಬೆಂಬಲ ನೀಡಿದ್ದಾರೆ.
ಹೀಗಾಗಿ ತುಮಕೂರಿನಲ್ಲಿ ಬಂಡಾಯದ ಚಟುವಟಿಕೆ ತೀವ್ರಗೊಂಡಿದ್ದು, ನಾಮಪತ್ರ ಹಿಂಪಡೆಯಲು ಮೂರು ದಿನ ಬಾಕಿ ಇದೆ.ಅಷ್ಟರಲ್ಲಿ ಅವರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ.
ಮಂಡ್ಯ, ಹಾಸನ ಜಿಲ್ಲೆಯಲ್ಲಿ ಪಕ್ಷದ ಆಂತರಿಕ ಬಂಡಾಯಕ್ಕಿಂತಲೂ ದೋಸ್ತಿ ಪಕ್ಷದ ವಿರುದ್ಧದ ಆಕ್ರೋಶ ತೀವ್ರಗೊಂಡಿದೆ. ಮಂಡ್ಯದಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಗಂಭೀರ ಎಚ್ಚರಿಕೆ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜಿಲ್ಲೆಯ ನಾಯಕರೊಂದಿಗೆ ಸಂಧಾನ ನಡೆಸಲು ಸತತ ಪ್ರಯತ್ನ ಮಾಡಿದರೂ ಅದು ಪೂರ್ಣ ಪ್ರಮಾಣದ ಯಶಸ್ಸು ಕಂಡಿಲ್ಲ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಕುದಿಯುತ್ತಿರುವ ಬಂಡಾಯ ಚಟುವಟಿಕೆಗಳು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
ಇನ್ನು ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸಿ ಪ್ರಚಾರ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇತೃತ್ವ ವಹಿಸಿ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿದ್ದ ಎ.ಮಂಜು ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರ ಪರವಾಗಿ ಕೆಲವು ಕಾಂಗ್ರೆಸ್ ನಾಯಕರು ಪ್ರಚಾರ ಮಾಡಲು ಮುಂದಾಗಿದ್ದಾರೆ.
ಉಳಿದಂತೆ ದಕ್ಷಿಣ ಕನ್ನಡದಲ್ಲೂ ಬಂಡಾಯದ ಹೊಗೆಯಾಡುತ್ತಿದೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಟ್ಟಿದ್ದಕ್ಕಾಗಿ ಪ್ರತಿಭಟನೆ ನಡೆಸಲಾಯಿತಾದರೂ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಚಿನ್ನೆಯಡಿಯಲ್ಲೇ ಸ್ಪರ್ಧಿಸಿರುವುದು ಬಂಡಾಯ ಚಟವಟಿಕೆಗೆ ತಣ್ಣೀರು ಎರಚಿದಂತಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕುತ್ತಿದ್ದರು.ಅಂತಿಮ ಕ್ಷಣದಲ್ಲಿ ಬಿ.ಕೆ.ಹರಿಪ್ರಸಾದ್ ಅವರನ್ನು ಹೈಕಮಾಂಡ್ ಕಣಕ್ಕಿಳಿಸಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಂಡಾಯವಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರು.ಆದರೆ, ಸಚಿವ ಕೃಷ್ಣಬೈರೇಗೌಡರು ಕಣಕ್ಕಿಳಿದಿರುವುದರಿಂದ ಎಲ್ಲವೂ ತಣ್ಣಗಾದಂತಾಗಿದೆ.