
ಬೆಂಗಳೂರು, ಮಾ.25-ಬಿಜೆಪಿಯವರು ನಮಗೆ ಬೇಷರತ್ ಬೆಂಬಲ ನೀಡಿದ್ದಾರೆ. ನಾವು ಎಲ್ಲವನ್ನೂ ಧೈರ್ಯದಿಂದ ಎದುರಿಸಲಿದ್ದೇವೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹಾಗೂ ನಟಿ ಸುಮಲತಾ ಅಂಬರೀಶ್ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ನಮಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಬಂದಿದ್ದೆ.ಯಡಿಯೂರಪ್ಪನವರ ಆಶೀರ್ವಾದ ಪಡೆದುಕೊಂಡಿದ್ದೇನೆ.
ಆದರೆ ಪ್ರಚಾರಕ್ಕೆ ಬರುವ ಬಗ್ಗೆ ಮಾತುಕತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಏನು ಬೇಕಾದರೂ ಮಾತನಾಡಲಿ: ದರ್ಶನ್ ಮತ್ತು ಯಶ್ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಟೀಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಏನು ಬೇಕಾದರೂ ಮಾತನಾಡಲಿ. ನಾನು ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ದರ್ಶನ್ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ. ನಾವು ಜನರ ಜೊತೆ ಇರೋಣ ಎಂದು ಸುಮಲತಾ ನುಡಿದರು.
ನಾವು ಗೆದ್ದ ಬಳಿಕ ಮುಂದೇನು ಎಂಬುದನ್ನೂ ಸಹ ಜನರನ್ನೇ ಕೇಳುತ್ತೇವೆ ಎಂದ ಅವರು, ನನಗೆ ಬೆಂಬಲ ನೀಡಿದ ಕೆಲವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.ಹೀಗೆ ಆಗುತ್ತದೆ ಎಂದು ಮೊದಲೇ ನಾವು ಊಹಿಸಿದ್ದೆವು. ಹಾಗಾಗಿ ಯಾರಿಗೂ ಬೇಸರವಿಲ್ಲ ಎಂದು ಹೇಳಿದರು.