ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಓಲೈಕೆ ಮುಂದಾಗಿರುವ ಕಾಂಗ್ರೆಸ್ ಹಲವು ಭರವಸೆಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಶೇ 20ರಷ್ಟು ಕಡು ಬಡ ಕುಟುಂಬಗಳಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯಡಿ ವಾರ್ಷಿಕ 72,000 ರೂ ಒದಗಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮಾಸಿಕ ತಲಾ 12,000 ರೂ.ಗಳ ಮೂಲ ಕನಿಷ್ಠ ಆದಾಯವನ್ನು ಖಾತ್ರಿಪಡಿಸುವುದಾಗಿ ಹೇಳಿದರು. ಇದೊಂದು ಅತ್ಯಂತ ಪರಿಣಾಮಕಾರಿ, ಐತಿಹಾಸಿಕ ಮತ್ತು ಚೆನ್ನಾಗಿ ಯೋಚಿಸಿ ರೂಪಿಸಿದ ಯೋಜನೆ. ನಾವು ಹಲವು ಅರ್ಥಶಾಸ್ತ್ರಜ್ಞರ ಜತೆ ಈ ಯೋಜನೆ ಬಗ್ಗೆ ಚರ್ಚಿಸಿದ್ದೇವೆ ಎಂದು ರಾಹುಲ್ ಹೇಲಿದ್ದಾರೆ.
ಇದು ಜಗತ್ತಿನ ಅತಿದೊಡ್ಡ ಕನಿಷ್ಠ ಆದಾಯ ಯೋಜನೆಯಾಗಲಿದೆ. ಬಡತನದ ವಿರುದ್ಧ ಅಂತಿಮ ಹೋರಾಟ ಆರಂಭವಾಗಿದೆ. ‘ನಾವು ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡಲಿದ್ದೇವೆ. ಈ ಯೋಜನೆಯಿಂದ ಒಟ್ಟಾರೆ 25 ಕೋಟಿ ಜನರಿಗೆ ಲಾಭವಾಗಲಿದೆ ಎಂದು ಭರವಸೆ ನೀಡಿದರು.
‘ನಾವು ಮಹಾತ್ಮಾಗಾಂಧಿ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಅದೇ ರೀತಿ ಈ ಯೋಜನೆಯನ್ನೂ ಜಾರಿಗೊಳಿಸುತ್ತೇವೆ. ಇದು ಆರ್ಥಿಕವಾಗಿಯೂ ಅನುಷ್ಠಾನಯೋಗ್ಯ ಯೋಜನೆಯಾಗಿದೆ’ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
21ನೇ ಶತಮಾನದಲ್ಲೂ ದೇಶದಲ್ಲಿ ಬಡತನ ತಾಂಡವಾಡುತ್ತಿದೆ ಎಂದರೆ ತುಂಬಾ ನೋವಾಗುತ್ತದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎರಡು ಭಾರತಗಳು ನಿರ್ಮಾಣವಾಗಿವೆ. ಒಂದು ಭಾರತ ಅನಿಲ್ ಅಂಬಾನಿ ಅವರಂಥವರದ್ದಾಗಿದ್ದರೆ, ಇನ್ನೊಂದು ಭಾರತ ಕಡುಬಡವರದ್ದಾಗಿದೆ. ಈ ವಿಭಜನೆಯನ್ನು ನಿವಾರಿಸಲು ಮಾಸಿಕವಾಗಿ 12 ಸಾವಿರ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಬಡವರಿಗೆ ವಾರ್ಷಿಕವಾಗಿ ಕನಿಷ್ಠ ಆದಾಯವನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರ ಪ್ರಕಾರ ವಾರ್ಷಿಕವಾಗಿ 72 ಸಾವಿರ ರೂ. ನಗದನ್ನು ಶೇ.20 ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ವಿವರಿಸಿದರು.
Rahul Gandhi announces minimum income guarantee scheme