ತುಮಕೂರು,ಮಾ.25- ಸಂಸದನಾಗಿ 24/7 ನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಪಕ್ಷದವರೇ ನಮ್ಮನ್ನು ಕಡೆಗಣಿಸಿ ಲೋಕಸಭಾ ಟಿಕೆಟ್ನ್ನು ತಪ್ಪಿಸಲಾಗಿದೆ ಎಂದು ಸಂಸದ ಮುದ್ದಹನುಮೇಗೌಡರು ಉಪಮುಖ್ಯಮಂತ್ರಿಗಳ ದೂರವಾಣಿ ಕರೆಯನ್ನು ಕಟ್ ಮಾಡಿರುವ ಪ್ರಸಂಗ ನಡೆದಿದೆ.
ಲೋಕಸಭಾ ಟಿಕೆಟ್ ಹಂಚಿಕೆ ಸಂಬಂಧ ಜಿಲ್ಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕಾಗಿ ತುುಕೂರಿನಲ್ಲೇ ಉಳಿದುಕೊಂಡಿದ್ದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ರವರು, ಮುದ್ದಹನುಮೇಗೌಡರ ಭೇಟಿಗೆ ದೂರವಾಣಿ ಕರೆ ಮಾಡಿದಾಗ ಅವರ ಭೇಟಿಯನ್ನು ನಿರಾಕರಿಸಿದ ಪ್ರಸಂಗ ನಡೆದಿದೆ.
ಮುದ್ದಹನುಮೇಗೌಡ ಅವರ ಬೆಂಬಲಿಗರ ಅಸಮಾಧಾನವನ್ನು ಶಮನ ಮಾಡುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳು ನಿನ್ನೆ ನಡೆಸಿದ ಸಭೆ ಸಂಪೂರ್ಣವಾಗಿ ವಿಫಲವಾದ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡರ ಭೇಟಿಗೆ ಡಿಸಿಎಂ ಕರೆ ಮಾಡಿ ನಾಳೆ ನೀವು ನಾಮಪತ್ರ ಸಲ್ಲಿಸುವುದು ಬೇಡ. ನಮ್ಮ ಜೊತೆ ಇರಿ ಎಂದಾಗ ಸಿಡಿಮಿಡಿಗೊಂಡ ಸಂಸದರು, ನಾನು ಉತ್ತಮ ಕೆಲಸ ಮಾಡಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದು ನನ್ನ ಇಚ್ಛೆ ಅಲ್ಲ. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡದಿಂದ ಸ್ಪರ್ಧಿಸುತ್ತಿದ್ದೇನೆ. ಮೈತ್ರಿ ಧರ್ಮವನ್ನು ಮುಂದಿಟ್ಟುಕೊಂಡು ನನ್ನನ್ನು ನಿರ್ಲಕ್ಷಿಸಿ ಟಿಕೆಟ್ ವಂಚಿಸಲಾಗಿದೆ ಎಂದು ಪೋನ್ ಕಟ್ ಮಾಡಿದ ಪ್ರಸಂಗ ನಡೆದಿದೆ ಎನ್ನಲಾಗಿದೆ.
ನಿನ್ನೆ 8 ಲೋಕಸಭಾ ಕ್ಷೇತ್ರಗಳಲ್ಲೂ ಸಂಚರಿಸಿ, ಕಾರ್ಯಕರ್ತರ, ಮತದಾರರ ಅಭಿಪ್ರಾಯ ಸಂಗ್ರಹಿಸಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ. ನಾಮಪತ್ರ ಸಲ್ಲಿಸಿಯೇ ತೀರುತ್ತೇನೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನವನ್ನು ತಣ್ಣಗಾಗಿಸಲು ಉಪಮುಖ್ಯಮಂತ್ರಿಗಳು ಹರಸಾಹಸಪಟ್ಟರೂ ಸಹ ಯಾವುದೇ ಫಲ ನೀಡಿಲ್ಲ.