ಬೆಂಗಳೂರು, ಮಾ.25-ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ ವತಿಯಿಂದ ಕಾರ್ಮಿಕ ಮುಖಂಡರಿಗೆ ರಾಜ್ಯಸಭಾ ಅಥವಾ ವಿಧಾನ ಪರಿಷತ್ ಸದಸ್ಯರಿಗೆ ಸ್ಥಾನ ನೀಡುವಂತೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ವಿಭಾಗದ ಡಾ.ಮೋಹನ್ ರಾವ್ ನಲವಾಡೆ ಮಾತನಾಡಿ, ಕಾರ್ಮಿಕ ವಿಭಾಗವು ಒಂದು ಪಕ್ಷದ ಘಟಕವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಕಾರ್ಮಿಕರ ಪರವಾಗಿ, ಕಾರ್ಮಿಕರ ಹಿತಕ್ಕಾಗಿ ಸದಾ ನೆರವಾಗುತ್ತಿದೆ. ಆದರೆ ಪಕ್ಷದಿಂದ ಕಾರ್ಮಿಕ ವಿಭಾಗದ ಮುಖಂಡರಿಗೆ ಇಂದಿನ ವರೆಗೆ ಲೋಕಸಭೆ, ವಿಧಾನ ಪರಿಷತ್, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಆದ್ದರಿಂದ ಸುಮಾರು ಶೇ.70ರಷ್ಟು ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರೂ ಸಹ ಕಾರ್ಮಿಕ ವಿಭಾಗಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದರು.
ಪಕ್ಷದ ಮುಖಂಡರು ಇನ್ನಾದರೂ ಮನವಿಯನ್ನು ಪರಿಗಣಿಸಿ ಖಾಲಿಯಿರುವ ವಿಧಾನ ಪರಿಷತ್ ಸದಸ್ಯತ್ವವನ್ನು ಕಾಂಗ್ರೆಸ್ ಹಿರಿಯ ಮುಖಂಡ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಡಾ.ಎಸ್.ಎಸ್.ಪ್ರಕಾಶಂ ಅವರಿಗೆ ನೀಡುವಂತೆ ಒತ್ತಾಯಿಸಿದರು.