ಬೆಂಗಳೂರು, ಮಾ.25- ಮೋದಿ ಸರ್ಕಾರ ಬೂಸ ಸರ್ಕಾರ ಎಂದು ಸಚಿವ ಕೃಷ್ಣಬೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ನಾಮಪತ್ರ ಸಲ್ಲಿಸುವ ಮುನ್ನ ಚೀಮಸಂದ್ರ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸುಳ್ಳಿನ ಸರಮಾಲೆಯನ್ನೇ ನೀಡಿ ಅಧಿಕಾರಕ್ಕೆ ಬಂದಿರುವ ಮೋದಿ ಮಾಡಿರುವ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಕಿಡಿಕಾರಿದರು.
ಯುವಕರಿಗೆ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರಿಂದ ಕಳೆದ ಬಾರಿ ಯುವಕರೆಲ್ಲಾ ಒಟ್ಟಾಗಿ ಬಿಜೆಪಿಗೆ ಮತ ನೀಡಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿದರು. ಅವರು ಮಾಡಿದ್ದಾದರೂ ಏನು ?ಪದವಿ ಮಾಡಿರುವ ಯುವಕರು ಸೆಕ್ಯುರಿಟಿ, ಡಿಲಿವರಿ ಬಾಯ್ ಆಗಿ ಕೆಲಸ ಮಾಡುವ ಪರಿಸ್ಥಿತಿಯನ್ನು ಮೋದಿ ನಿರ್ಮಾಣ ಮಾಡಿದ್ದಾರೆ. ಪೋಳ್ಳು ಭರವಸೆಗೆ ಈ ಬಾರಿ ಯುವ ಪೀಳಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಸೋತ ಅಭ್ಯರ್ಥಿಯಿಂದ ಮಹದೇವಪುರ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಕೆಲಸ ಆಗಿದೆ. ಗೆದ್ದ ಅಭ್ಯರ್ಥಿ ಮಹದೇವಪುರ ಕ್ಷೇತ್ರಕ್ಕೆ ಕಳೆದ ಹತ್ತು ವರ್ಷಗಳಿಂದ ಮಾಡಿರುವುದಾದರೂ ಏನು ಎಂದು ಪ್ರಶ್ನಿಸಿದರು.
ಶಾಸಕ ಬೈರತಿ ಸುರೇಶ್ ಮಾತನಾಡಿ, ಧರ್ಮಗಳ ನಡುವೆ ಗಲಭೆ ಎಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ.ದೇಶವನ್ನು ಒಡೆಯುವ ಕೆಲಸ ಬಿಜೆಪಿಯಿಂದ ಆಗುತ್ತಿದೆ.
ಇಂತಹ ಪಕ್ಷವನ್ನು ತೊಲಗಿಸಲು ಇದು ಸರಿಯಾದ ಸಮಯ ಬಿಜೆಪಿಯನ್ನು ದೇಶದಿಂದ ತೊಲಗಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಮಹದೇವಪುರ ಕ್ಷೇತ್ರದಲ್ಲಿ ಎಂಎಲ್ಎ, ಎಂಪಿ ಮಾಡಿರುವ ಅಭಿವೃದ್ಧಿಯಾದರೂ ಏನು ? ಈ ಕ್ಷೇತ್ರಕ್ಕೆ ಕಾಂಗ್ರೆಸ್ನ ಜನಪ್ರತಿನಿಧಿಬೇಕು, ಅಭಿವೃದ್ಧಿ ಬೇಕು ಆದ್ದರಿಂದ ವಿಧಾನಸಭೆಯಲ್ಲಿ ನೀಡಿದ ಮತಗಳನ್ನು ಮತ್ತೆ ಲೋಕಸಭೆ ಚುನಾವಣೆಯಲ್ಲಿ ರಿಜ್ವಾನ್ ಅರ್ಷದ್ ಅವರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಾತನಾಡಿ, ಜಾತಿ ಬಗ್ಗೆ ಮಾತನಾಡುವ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ರವರು ಎಷ್ಟು ದೇವಾಲಯಗಳಿಗೆ ಹೋಗಿದ್ದಾರೆ ? ದೇವಾಲಯಗಳಿಗೆ ಅವರ ಕೊಡುಗೆ ಏನು ?ಆದರೆ, ನಾನು ಎಲ್ಲಾ ದೇವಾಲಯಗಳಿಗೂ ತೆರಳಿದ್ದೇನೆ ನನ್ನ ಕೈಲಾದ ಮಟ್ಟಿಗೆ ದೇವಾಲಯಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಹಾಗೂ ಅನುದಾನವನ್ನು ನೀಡಿದ್ದೇನೆ ಎಂದು ಹೇಳಿದರು.
ಮಹದೇವಪುರ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಪಿ.ಸಿ.ಮೋಹನ್ ಯಾರೂ ಅಂತಲೇ ಗೊತ್ತಿಲ್ಲ, ಇನ್ನೂ ಅಭಿವೃದ್ಧಿ ಶೂನ್ಯ. ನಾನು ಕಳೆದ ಬಾರಿ ಸೋತರೂ ಜನರ ಮಧ್ಯೆ ಇದ್ದು ಅಭಿವೃದ್ಧಿ ಮಾಡಿದ್ದೇನೆ ಎಂದು ತಿಳಿಸಿದರು.
ಜಿಪಂ ಸದಸ್ಯರಾದ ಕೆಂಪರಾಜು, ಮಹಾಲಕ್ಷ್ಮೀ ಜಯರಾಂ, ಶೇಖರ್, ಬಿಬಿಎಂಪಿ ಸದಸ್ಯ ಹರಿಪ್ರಸಾದ್, ಬ್ಲಾಕ್ ಅಧ್ಯಕ್ಷರಾದ ಎಂಸಿಬಿ ಮುನಿರಾಜು, ಶ್ರೀನಿವಾಸ್ರೆಡ್ಡಿ, ಮಾಜಿ ಅಧ್ಯಕ್ಷ ಜಯರಾಂರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಕಣ್ಣೂರು ಪಂಚಾಯಿತಿ ಅಧ್ಯಕ್ಷ ಅಶೋಕ್, ಮುಖಂಡರಾದ ರಾಮಕೃಷ್ಣಪ್ಪ, ಚಿಕ್ಕಮುನಿಯಪ್ಪ, ದೊಮ್ಮಸಂದ್ರ ಮಧು, ಮೋಹನ್ರೆಡ್ಡಿ, ಅನಿಲ್, ರಮೇಶ್, ರಾಜೇಶ್, ಬಾಬು, ಪಂಚಾಯಿತಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.