ಬೆಂಗಳೂರು,ಮಾ.25- ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರಾಗಿರುವ ಬಾಲಶೇಖರ್ ಅವರು ಪ್ರಭಾವಿ ಸಚಿವರೊಬ್ಬರು ಅಳಿಯನಾಗಿರುವುದರಿಂದ ಲೋಕಸಭಾ ಚುನಾವಣೆ ಮುಗಿಯುವವರೆಗೂ ಅವರನ್ನು ಬೇರೆ ಸ್ಥಾನಕ್ಕೆ ವರ್ಗಾವಣೆ ಮಾಡುವಂತೆ ಬಿಜೆಪಿ ಒತ್ತಾಯಿಸಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಅವರನ್ನು ಇಂದು ಭೇಟಿಯಾದ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು, ಬಾಲಶೇಖರ್ ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ವಲಯ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಬಾಲಶೇಖರ್ ಅವರು ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿರುವ ವೆಂಕಟರಮಣಪ್ಪ ಅವರ ಅಳಿಯರಾಗಿರುವುದರಿಂದ ಮತದಾರರ ಮೇಲೆ ಪ್ರಭಾವ ಬೀರಲು ಅವಕಾಶವಿದೆ.
ಬಾಲಶೇಖರ್ ಅವರು ಜಂಟಿ ಆಯುಕ್ತರಾಗಿರುವ ರಾಜರಾಜೇಶ್ವರಿನಗರ ವಲಯ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೊಳಪಡುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.
ಹೀಗಾಗಿ ಬಾಲಶೇಖರ್ ಅವರ ಮಾವ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಮುಖಂಡರಾಗಿರುವುದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಜಂಟಿ ಆಯುಕ್ತರು ಪ್ರಭಾವ ಬೀರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಹೀಗಾಗಿ ಕೂಡಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಬಾಲಶೇಖರ್ ಅವರನ್ನು ಬೇರೆ ಸ್ಥಾನಕ್ಕೆ ವರ್ಗಾವಣೆ ಮಾಡುವಂತೆ ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ.