ಮೈಸೂರು,ಮಾ.25- ಬಿಜೆಪಿಗೆ ದಲಿತರು, ಅಲ್ಪಸಂಖ್ಯಾತರ ಮತ ಬೇಕು. ಆದರೆ ಅವರ ಬಗ್ಗೆ ಕಾಳಜಿ ಮಾತ್ರ ಇಲ್ಲ ಎಂದು ಮಾಜಿ ಸಚಿವ , ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಇಂದಿಲ್ಲಿ ದೂರಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಹಿಂದುಳಿದ ವರ್ಗದವರಿಗೆ ಒಂದೂ ಟಿಕೆಟ್ ನೀಡಿಲ್ಲ. ಇದನ್ನು ಗಮನಿಸಿದರೆ ಹಿಂದುಳಿದ ವರ್ಗದವರ ಬಗ್ಗೆ ಅವರಿಗೆ ಕಾಳಜಿ ಎಂಬುದು ಗೊತ್ತಾಗುತ್ತದೆ ಎಂದರು.
ತಮ್ಮೊಂದಿಗೆ ಈ ವೇಳೆ ಯಾವುದೇ ಜೆಡಿಎಸ್ ನಾಯಕರು ಇಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧಿಕೃತವಾಗಿ ಈವರೆಗೂ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ರಾಜಕೀಯವಾಗಿ ಕೊನೆ ಕ್ಷಣದವರೆಗೂ ಬದಲಾವಣೆಯಾಗಬಹುದು. ಇದೀಗ ನನ್ನನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿ ಅವರ ಸಹಕಾರದೊಂದಿಗೆ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದರು.