ತುಮಕೂರು, ಮಾ.24-ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಜಿ.ಎಸ್.ಬಸವರಾಜು, ಮಾಜಿ ಶಾಸಕ ಸುರೇಶ್ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಆರ್.ಹುಲಿನಾಯ್ಕರ್ ನಡುವೆ ತೀವ್ರ ಪೈಪೋಟಿ ಏರ್ಪಟ ಕಾರಣ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಾಗಿತ್ತು. ಕಡೆಗೆ ಬಸವರಾಜು ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಕಳೆದ ಏಳೆಂಟು ವರ್ಷಗಳಿಂದ ಜಿಲ್ಲೆಯಲ್ಲಿ ಕೆಜೆಪಿ-ಬಿಜೆಪಿ ಎಂದು ಎರಡು ಭಾಗಗಳಾಗಿ ಇಂದಿನವರೆಗೂ ಎರಡು ಗುಂಪುಗಾಳಗಿಯೇ ಮುಂದುವರೆಯಿತು. ಇದರಿಂದ ಕಳೆದ ಹಲವು ಚುನಾವಣೆಗಳಲ್ಲಿ ಭಾರಿ ಪರಿಣಾಮ ಬೀರಿತ್ತು.
ಇದೀಗ ಲೋಕಸಭಾ ಚುನಾವಣೆ ಬಂದಿದೆ. ಜಿ.ಎಸ್.ಬಸವರಾಜುಗೆ ಟಿಕೆಟ್ ಸಿಕ್ಕಿದೆ. ಇದರಿಂದ ಒಳಗೊಳಗೆ ಮೂಲ ಬಿಜೆಪಿಗರೆಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರರು ತೀವ್ರ ಅಸಮಾಧಾನಗೊಂಡಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ಗೌಡ ಕೂಡಾ ಬಸವರಾಜು ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿದ್ದಾರೆ.
ಒಟ್ಟಾರೆ ಇದೆಲ್ಲದರಿಂದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಇದನ್ನು ಶಮನಗೊಳಿಸಲು ಬಿ.ಎಸ್.ಯಡಿಯೂರಪ್ಪ, ಮಾಜಿಸಚಿವ ವಿ.ಸೋಮಣ್ಣ ಮತ್ತಿತರ ಪ್ರಮುಖರು ಇಂದು ಸಂಜೆ ಶಿವಣ್ಣ ಅವರ ಮನೆಗೆ ತೆರಳಿ ಮಾತುಕತೆ ನಡೆಸಲಿದ್ದಾರೆ.