ತುಮಕೂರು, ಮಾ.24- ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ತುಮಕೂರು ಲೋಕಸಭಾ ಕ್ಷೇತ್ರ ಕೈ ತಪ್ಪಿರುವ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಇಂದು ನಡೆದ ಸಭೆಯ ಅಂತಿಮ ಘಟ್ಟದಲ್ಲಿ ಹಾಲಿ ಸಂಸದ ಮುದ್ದಹನುಮೇಗೌಡರ ಬೆಂಬಲಿಗರಿಂದ ತೀವ್ರ ಆಕ್ರೋಶ ಎದುರಾಯಿತು.
ಇಂದು ಬೆಳಗ್ಗೆ ಪರಮೇಶ್ವರ್ ಕರೆದಿದ್ದ ಸಭೆಯಲ್ಲಿ ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಹಾಗೂ ಬೆಂಬಲಿಗರು ಪಾಲ್ಗೊಂಡಿರಲಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಪರಮೇಶ್ವರ್ ಮೈತ್ರಿ ಧರ್ಮ ಪಾಲಿಸಲೇಬೇಕು. ಕೋಮುವಾದಿ ಬಿಜೆಪಿ ಪಕ್ಷವನ್ನು ದೂರವಿಡಬೇಕಾಗಿರುವುದರಿಂದ ಎಲ್ಲರೂ ಮೈತ್ರಿಧರ್ಮಕ್ಕೆ ಬೆಂಬಲ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಸಭೆ ಮುಗಿಯುವ ಹಂತದಲ್ಲಿ ಆಗಮಿಸಿದ ಮುದ್ದಹನುಮೇಗೌಡರ ಬೆಂಬಲಿಗರು ನಿಮ್ಮ ಮೃದು ಧೋರಣೆಯೇ ಕಾಂಗ್ರೆಸ್ಗೆ ಸ್ಥಾನ ತಪ್ಪಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.