
ಬೆಂಗಳೂರು: ಬಿಜೆಪಿಯಿಂದ ಅಧಿಕೃತವಾಗಿ ಬೆಂಬಲ ಘೋಷಿಸಿರುವುದು ಇನ್ನಷ್ಟು ಬಲ ಹೆಚ್ಚಿದಂತಾಗಿದೆ. ನನ್ನ ಮನಸಿನಲ್ಲಿಯೂ ಬಿಜೆಪಿ ಬೆಂಬಲ ನೀಡಲಿ ಎಂದು ಇತ್ತು. ಈಗ ನನಗೆ ಮತ್ತಷ್ಟು ಶಕ್ತಿ ಬಂದಂತಾಯಿತು ಎಂದು ಸುಮಲತಾ ಅಂಬರೀಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಅಭ್ಯರ್ಥಿಯಾಗುವುದು ಕಠಿಣ ಸವಾಲು. ಆದರೂ ಜನರು ಹೇಳಿದ್ದಾರೆಂದು ಆ ಸವಾಲನ್ನು ಸ್ವೀಕರಿಸಿದ್ದೇನೆ.
ಹಾಗೇ ಬಿಜೆಪಿಗೆ ಸೇರುವ ಬಗ್ಗೆಯೂ ನಾನು ಜನರನ್ನೇ ಕೇಳುತ್ತೇನೆ. ನಾನು ಜನರಿಗಾಗಿ ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದೇನೆ. ಅವರು ಹೇಳಿದಂತೆಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ಕೆಲವು ಕಾರ್ಯಕರ್ತರೂ ನನ್ನ ಪರ ಕೆಲಸ ಮಾಡಲು ಬರುತ್ತಿದ್ದಾರೆ. ಅವರನ್ನು ಪಕ್ಷ ಉಚ್ಚಾಟನೆ ಮಾಡಿರಬಹುದು. ಆದರೆ ಅವರು ನನ್ನ ಪರ ಕೆಲಸ ಮಾಡುವುದನ್ನು ತಪ್ಪಿಸಲು ಆಗುವುದಿಲ್ಲ. ಇಲ್ಲಿ ಸರ್ವಾಧಿಕಾರತ್ವ ನಡೆಯುವುದಿಲ್ಲ. ಈಗ ಬಿಜೆಪಿಯ ಕಾರ್ಯಕರ್ತರೂ ನನಗೆ ಬೆಂಬಲ ನೀಡುತ್ತಾರೆ. ಅಲ್ಲದೆ ಯಶ್, ದರ್ಶನ್ ಅಭಿಮಾನಿಗಳು ಇದ್ದಾರೆ. ಅಖಿಲ ಕರ್ನಾಟಕ ರೈತ ಸಂಘವೂ ನನ್ನ ಜತೆ ನಿಂತಿದೆ. ಇವರನ್ನೆಲ್ಲ ಒಟ್ಟಾಗಿ ಸೇರಿಸಿಕೊಂಡು ಬೂತ್ ಮಟ್ಟದಲ್ಲಿ ಕೆಲಸಮಾಡುತ್ತೇವೆ ಎಂದು ಹೇಳಿದರು.
ಮಹಿಳೆಯರು ಪುರುಷ ಜನಪ್ರತಿನಿಧಿಗಳ ಬಳಿ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವುದಿಲ್ಲ. ಆದರೆ ನನ್ನ ಬಳಿ ಎಲ್ಲವನ್ನೂ ಹೇಳಬಹುದು. ಹೀಗಾಗಿ ಖಂಡಿತ ಮಹಿಳೆಯರೂ ಸಹಕಾರ ನೀಡುತ್ತಾರೆ ಎಂಬ ನಂಬಿಕಿಯಿದೆ ಎಂದರು.