ಬೆಂಗಳೂರು: ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾತ್ರೋರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಯಾರ ಜೊತೆಗೂ ಭಿಕ್ಷೆ ಬೇಡಲ್ಲ ಎಂದಿದ್ದರು. ಆದರೆ ಈಗ ಅನಿವಾರ್ಯವಾಗಿ ಸಿಎಂ ಸಿದ್ದರಾಮಯ್ಯ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮಂಡ್ಯ ಅಖಾಡದಲ್ಲಿ ಹಿಂದುಳಿದ ದಲಿತ ಹಾಗೂ ಅಲ್ಪ ಸಂಖ್ಯಾತ ಮತಗಳನ್ನ ಸೆಳೆಯಬೇಕಾದರೆ ಸಿದ್ದರಾಮಯ್ಯ ನೆರವು ಅನಿವಾರ್ಯ ಎಂದು ದೇವೇಗೌಡರ ಕುಟುಂಬಕ್ಕೆ ಅರ್ಥವಾಗಿದೆ. ಆದ್ದರಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಸ್ವತ: ಅಖಾಡಕ್ಕೆ ಇಳಿದು ಮಗನ ಗೆಲುವಿಗೆ ಸಹಕರಿಸುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ. ಜೊತೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಮಂಡ್ಯಕ್ಕೆ ಬರುವಂತೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮುಖಂಡರ ಒಳ ಏಟಿನ ಭಯದ ಬಗ್ಗೆಯು ಆತಂಕ ವ್ಯಕ್ತಪಡಿಸಿ ಅದನ್ನು ಸರಿ ಪಡಿಸುವಂತೆ ಮನವಿ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಮೈತ್ರಿ ಸೂತ್ರ ಪಾಲನೆಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಹಾಸನ ಜಿಲ್ಲೆಯಲ್ಲಿ ದಶಕಗಳ ಕಾಲ ಕಾಂಗ್ರೆಸ್ ನಾಯಕರ ಮುಖವೆತ್ತಿ ನೋಡದ ರೇವಣ್ಣ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಜಿ ಸಂಧಾನದ ಮಾತನಾಡಿದ್ದು, ಮುಂದೆಯು ಜಿಲ್ಲೆಯಲ್ಲಿ ಕಾಂಗ್ರೆಸ್ ಜೊತೆ ಜೊತೆಗೆ ಹೋಗುವ ಮಾತನಾಡಿದ್ದಾರೆ.
ಒಂದು ಕಾಲದಲ್ಲಿ ದೇವೇಗೌಡರನ್ನು ಎದುರು ಹಾಕಿಕೊಂಡ ಸಿದ್ದರಾಮಯ್ಯರ ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು ಎನ್ನಲಾಗುತ್ತಿತ್ತು. ದೇವೇಗೌಡರಿಗೆ ಸೆಡ್ಡು ಹೊಡೆದು ಪಕ್ಷ ಬಿಟ್ಟ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ 5 ವರ್ಷ ಕಾಲ ಮುಖ್ಯಮಂತ್ರಿಯು ಆಗಿದ್ದರು. ಮೈತ್ರಿಯ ಹೊರತಾಗಿಯು ಗೌಡರ ಕುಟುಂಬದೊಂದಿಗೆ ಒಂದು ಹಂತದ ಅಂತರ ಕಾಪಾಡಿಕೊಂಡಿದ್ದ ಸಿದ್ದರಾಮಯ್ಯಗೆ ಈಗ ಹೊಸ ಧರ್ಮ ಸಂಕಟ ಶುರುವಾಗಿದೆ.
ಈಗ ಕಾಲ ಚಕ್ರ ತಿರುಗಿದೆ ಗೌಡರ ಕುಟುಂಬ ಸಿದ್ದರಾಮಯ್ಯ ಮನೆ ಬಾಗಿಲಿಗೆ ಬಂದು ನೆರವು ಕೇಳಿದೆ. ನೆರವು ನೀಡಬೇಕಾದ ಅನಿವಾರ್ಯತೆಗೆ ಸಿದ್ದರಾಮಯ್ಯ ಸಿಲುಕಿದ್ದಾರೆ.