ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ’ ಪಿಎಂ ನರೇಂದ್ರ ಮೋದಿ’ ಏಪ್ರಿಲ್ 12ರಂದು ಬಿಡುಗಡೆಯಾಗುತ್ತಿದ್ದು, ಚಿತ್ರ ಬಿಡುಗಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ವಿರೋಧ ವ್ಯಕ್ತಪಡಿಸಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಚಿತ್ರ ಬಿಡುಗಡೆಯಾದರೆ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದೆ.
ಈ ಬಗ್ಗೆ ಎಂಎನ್ಎಸ್ ನಾಯಕಿ ಶಾಲಿನಿ ಠಾಕ್ರೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ತನ್ನ ಸರ್ಕಾರದ ಯೋಜನೆಗಳನ್ನು ಪ್ರಚಾರಗೊಳಿಸಲು ಸಿನಿಮಾಗಳನ್ನು ಬಳಸಿಕೊಳ್ಳುತ್ತಿದೆ. ಈ ಮೊದಲು ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಮತ್ತು ‘ಪ್ಯಾಡ್ ಮ್ಯಾನ್’ ಸಿನಿಮಾಗಳಿಗೆ ಕೇಂದ್ರ ಸರ್ಕಾರವೇ ಪ್ರಾಯೋಜಕತ್ವ ನೀಡಿತ್ತು. ಈಗ ಪ್ರಧಾನಿ ಮೋದಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಪ್ರಚಾರ ಯೋಜನೆ ರೂಪಿಸಿದೆ. ಎಂ ಎನ್ ಎಸ್ ಪಕ್ಷ ಈ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ ಮಹಾರಾಷ್ಟ್ರ ನವನಿರ್ಮಾಣ ಚಿತ್ರಪಥ್ ಕರ್ಮಚಾರಿ ಸೇನೆ ಅಧ್ಯಕ್ಷ ಅಮೇ ಕೋಪ್ಕರ್ ಕೂಡ ಪ್ರಧಾನಿ ಮೋದಿ ಬಯೋಪಿಕ್ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರದ್ಧಾನಿ ಮೋದಿ ಬಯೋಪಿಕ್ ಬಿಡುಗಡೆ ಮಾಡುವ ಮೂಲಕ ಚುನಾವಣೆ ವೇಳೆ ಬಿಜೆಪಿ ನಾಯಕರು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಪ್ರಚಾರಕ್ಕಾಗಿ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಜೆಪಿ ನಾಯಕರು ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಿನಿಮಾ ನಿರ್ಮಾಪಕರು ಕಥೆ, ಸಂಭಾಷಣೆ ಜಾವೇದ್ ಅಖ್ತರ್ ಮತ್ತು ಸಮೀರ್ ಲೇಖನಿಯಲ್ಲಿ ಮೂಡಿ ಬಂದಿದೆ ಎಂದು ಹೇಳುತ್ತಾರೆ. ಇಬ್ಬರು ಸಾಹಿತ್ಯಗಾರರು ಮೋದಿ ಜೀವನಾಧರಿತ ಸಿನಿಮಾಗೂ ಮತ್ತು ನಮಗೂ ಸಂಬಂಧವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಹೀಗಿರುವಾಗ ಬಿಜೆಪಿ ಈ ರೀತಿ ಪ್ರಚಾರಕ್ಕಾಗಿ ಸಿನಿಮಾ ಬಿಡುಗಡೆಗೆ ಮುಂದಾಗುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ವಿವೇಕ್ ಓಬೇರಾಯ್ ಪ್ರಧಾನಿ ಮೋದಿ ಪಾತ್ರದಲ್ಲಿ ಅಭಿನಯಿಸಿರುವ ಮೋದಿ ಬಯೋಪಿಕ್ ಏಪ್ರಿಲ್ 12ರಂದು ಒಟ್ಟು 23 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
MNS threatens agitation against movie on Prime Minister Narendra Modi