ಬಳ್ಳಾರಿ,ಮಾ.24-ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಅಖಾಡಕ್ಕಿಳಿದ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾದರು.
ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರನ್ನು 2 ಲಕ್ಷಕ್ಕೂ ಅಧಿಕ ಮತಗಳಿಂದ ಕ್ಷೇತ್ರದ ಮತದಾರರು ಗೆಲ್ಲಿಸಿದ್ದರು. ಈ ಬಾರಿ ಅದಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ನೀಡಬೇಕೆಂದು ಮನವಿ ಮಾಡಿದರು.
ಬಳ್ಳಾರಿಯಲ್ಲಿ ಈವರೆಗೆ ಕಾಂಗ್ರೆಸ್ ಪಕ್ಷ ಅತಂತ್ರವಾದಂತಾಗಿತ್ತು. ಹಲವು ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್ ಶಾಸಕರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಭಿನ್ನಮತ ತಲೆದೋರಿತ್ತು. ಇಂದು ಜಿಲ್ಲೆಯ ಅಖಾಡಕ್ಕೆ ಧುಮುಕಿದ ಶಿವಕುಮಾರ್ ಎಲ್ಲರೊಂದಿಗೆ ಮಾತುಕತೆ ನಡೆಸಿ ಸಮಾವೇಶದಲ್ಲಿ ಒಗ್ಗೂಡುವಂತೆ ಮಾಡಿದರು.
ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಜೊತೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಕಣಕ್ಕಿಳಿದರೆ ಅವರ ವಿರುದ್ಧ ಸ್ಪರ್ಧಿಸುವ ಹೊಣೆಗಾರಿಕೆ ಹಾಗೂ ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಅವರೂ ಕೂಡ ಶಿವಕುಮಾರ್ ಅವರಿಗೇ ಉಸ್ತುವಾರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದಲ್ಲದೆ ಮಂಡ್ಯದಲ್ಲಿ ಕಾಂಗ್ರೆಸ್‍ನ ಆಂತರಿಕ ಭಿನ್ನಾಭಿಪ್ರಾಯವನ್ನು ಬಗೆಹರಿಸಬೇಕಾದ ಜವಾಬ್ದಾರಿ ಇವರ ಮೇಲಿದೆ. ಈ ನಡುವೆ ಸಂಡೂರು ಕ್ಷೇತ್ರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಿ ಉಗ್ರಪ್ಪ ಪರ ಮತಯಾಚನೆ ಮಾಡಿದರು.
ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್, ಶ್ರೀರಾಮುಲು ಜಂಟಿಯಾಗಿ ಕಾರ್ಯತಂತ್ರ ರೂಪಿಸಿದ್ದಾರೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರ ಮತ ಯಾಚನೆ ನಡೆಸಿದ್ದಾರೆ.
ಕಾಂಗ್ರೆಸ್‍ನ ಶಾಸಕರಾದ ನಾಗೇಂದ್ರ ಅವರ ಸಹೋದರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರಾದರೂ ಅವರಿಗೆ ಟಿಕೆಟ್ ಸಿಕ್ಕಲಿಲ್ಲ. ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದು ಅವರು ಯಾವ ಕ್ರಮ ಕೈಗೊಳ್ಳುತ್ತಾರೆ, ಆನಂದ್ ಸಿಂಗ್ ಮತ್ತಿತರರನ್ನು ಡಿ.ಕೆ.ಶಿವಕುಮಾರ್ ಮನವೊಲಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗೆ ಮೇಲೆತ್ತುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಉಗ್ರಪ್ಪನವರು ತಮಗೆ ಸಿಕ್ಕ 6 ತಿಂಗಳ ಕಾಲಾವಕಾಶದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಉಪಚುನಾವಣೆ ಸಂದರ್ಭದಲ್ಲಿ ಅವರಿಗಿದ್ದ ಭಾರಿ ಬೆಂಬಲದ ಪರಿಸ್ಥಿತಿ ಈಗಿಲ್ಲ. ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆಯೋ ಕಾಲವೇ ನಿರ್ಧರಿಸಬೇಕು.