ತುಮಕೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡು ಅಳೆದು ತೂಗಿ ಕೊನೆಗೆ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈಗ ಅದೇ ಕ್ಷೇತ್ರದಿಂದ ದೇವೇಗೌಡರಿಗೆ ಮತ್ತೊಂದು ಬಿಗ್ ಶಾಕ್ ಆಗಿದೆ.
ಒಂದು ಕಡೆ ಮುದ್ದಹನುಮೇಗೌಡರ ಬಂಡಾಯ ನಡೆಸುತ್ತಿದ್ದಾರೆ. ಇತ್ತ ಸಂಸದರ ಬಂಡಾಯದ ಜೊತೆಗೆ ಕೆ.ಎನ್ ರಾಜಣ್ಣನೂ ರೆಬಲ್ ಆಗಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಜಣ್ಣ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಕೈ ಬಂಡಾಯ ಅಭ್ಯರ್ಥಿಯಾಗಿ ಕೆ.ಎನ್ ರಾಜಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆದರೆ, ದೇವೇಗೌಡರ ವಿರುದ್ಧ ಗುಟುರು ಹಾಕಲು ರಾಜಣ್ಣ ಸಿದ್ಧವಾಗುತ್ತಿದ್ದಾರೆ.
ಕಾಂಗ್ರೆಸ್ಸಿನ ಹಾಲಿ ಸಂಸದರಾದ ಮುದ್ದೆಹನುಮೇಗೌಡರಿಗೆ ಲೋಕಸಭಾ ಚುನವಣಾ ಟಿಕೆಟ್ ಕೈ ತಪ್ಪಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮುದ್ದೆಹನುಮೇಗೌಡರು ತಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ನಾಳೆ ನಾಮಪತ್ರ ಸಲ್ಲಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಇತ್ತ ಡಿಸಿಎಂ ಪರಮೇಶ್ವರ್ ಅವರು ಕಾಂಗ್ರೆಸ್ ನಾಯಕರನ್ನು ಕರೆದು ಖಾಸಗಿ ಹೋಟೆಲಿನಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಈ ಸಭೆಗೆ ಬಂಡಾಯ ಅಭ್ಯರ್ಥಿಗಳಾದ ಮುದ್ದೆಹನುಮೇಗೌಡ ಮತ್ತು ರಾಜಣ್ಣ ಇಬ್ಬರು ಗೈರಾಗಿದ್ದಾರೆ. ಅಷ್ಟೇ ಅಲ್ಲದೇ ಮುದ್ದಹನುಮೇಗೌಡ ತುಮಕೂರಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ತಮ್ಮ ಸಭೆಯನ್ನು ಮುಂದುವರಿಸಿದ್ದಾರೆ. ಕೊರಟಗೆರೆ ಕಾಂಗ್ರೆಸ್ ಮುಖಂಡ ಎ.ಡಿ.ಬಲರಾಮಯ್ಯ ಮನೆಯಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕರ್ತರ ಜೊತೆ ಚುನಾವಣಾ ಸಮಾಲೋಚನೆ ನಡೆಸುತ್ತಿದ್ದಾರೆ.