ಡಿಸಿಎಂ .ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ

ತುಮಕೂರು, ಮಾ.24- ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ನಾಳೆ ನಾಮಪತ್ರ ಸಲ್ಲಿಸುತ್ತಿರುವ ನಡುವೆಯೇ ಇಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಿರುವುದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟು ನಂತರ ಜಿಲ್ಲೆಯ ಕಾಂಗ್ರೆಸ್ ಪಾಳ್ಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಉಪಮುಖ್ಯಮಂತ್ರಿ ಪರಮೇಶ್ವರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ನಂತರ ಎಚ್ಚೆತ್ತುಕೊಂಡಿದ್ದ ಪರಮೇಶ್ವರ್, ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಕ್ಷೇತ್ರ ಬಿಟ್ಟುಕೊಡುವಂತೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದರು.

ಆದರೆ ಯಾರು ಇದಕ್ಕೆ ಮಣಿಯಲಿಲ್ಲ ಇಷ್ಟಕ್ಕೆ ಸುಮ್ಮನಾಗದ ಪರಮೇಶ್ವರ್ ದೇವೇಗೌಡರ ಮನೆಗೂ ಹೋಗಿ ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ದೇವೇಗೌಡರ ಕ್ಷೇತ್ರ ಆಯ್ಕೆ ಪ್ರಕ್ರಿಯೆಯೂ ನಿನ್ನೆವರಿಗೂ ನಿಗೂಢವಾಗಿಯೇ ಉಳಿದಿತ್ತು. ನಿನ್ನೆ ಮಧ್ಯಾಹ್ನ ಅಧಿಕೃತವಾಗಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ದೇವೇಗೌಡರು ಘೋಷಿಸಿದ್ದರು.

ಅದರಂತೆ ಇಂದು ಸಿದ್ದಗಂಗಾ ಕ್ಷೇತ್ರದಲ್ಲಿನ ಶ್ರೀ ಶಿವಕುಮಾರ್ ಸ್ವಾಮಿಯವರ ಗದ್ದುಗೆಗೆ ಭೇಟಿ ನೀಡಿ. ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಆದಿಚುಂಚನಗಿರಿ ಪೀಠಕ್ಕೂ ತೆರಳಿ ದೇವರ ದರ್ಶನ ಹಾಗೂ ಶ್ರೀಗಳ ಆಶೀರ್ವಾದವನ್ನು ದೇವೇಗೌಡರು ಪಡೆಯಲಿದ್ದು ನಾಳೆ ತುಮಕೂರಿಗೆ ತೆರಳಿ ಮಧ್ಯಾಹ್ನ 2.15ರ ವೇಳೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಎಲ್ಲ ವಿದ್ಯಮಾನ ಘೋಷಣೆಗೂ ಮುನ್ನವೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಸ್.ಪಿ.ಮುದ್ದಹನುಮೇಗೌಡರು ತಮ್ಮ ಹೆಬ್ಬೂರಿನ ತೋಟದ ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ತಿಳಿಸಿದ್ದರಲ್ಲದೆ ನಾಳೆ ಅಂದರೆ ಸೋಮವಾರ 25ರಂದು ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದ್ದರು.

ಕಾಂಗ್ರೆಸ್‍ನಲ್ಲಿ ಬಂಡಾಯ ಭುಗಿಲೆದ್ದ ಹಿನ್ನಲೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯನ್ನು ಇಂದು ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಗುಬ್ಬಿ ತಾಲೂಕಿನ ಮುಖಂಡ ಹೊನ್ನಗಿರಿಗೌಡ, ಮಾಜಿ ಶಾಸಕ ಶಫಿ ಅಹಮ್ಮದ್, ರಫೀಕ್ ಅಹಮ್ಮದ್, ಜಿ.ಪಂ., ತಾ.ಪಂ, ಮುಖಂಡರು ಭಾಗವಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ