ಧಾರವಾಡ,ಮಾ.23-ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ ಸಂಬಂಧ ನಗರ ಯೋಜನೆ ಇಲಾಖೆಯ 7 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು.
ಕಟ್ಟಡ ದುರಂತ ಪ್ರಕರಣದಲ್ಲಿ 16 ಜನ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ.
ಕಟ್ಟಡ ಕಟ್ಟಲು ಅನುಮತಿ ನೀಡಿದ, ಸಿಸಿ ನೀಡಿದ ಸಂಬಂಧ ಇಲಾಖೆಯ 7 ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಕಟ್ಟಡದ ಮಾಲೀಕರು ಹಾಗೂ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ಕಟ್ಟಡ ಕುಸಿತ ಪ್ರಕರಣ ಅತ್ಯಂತ ದುರದೃಷ್ಟಕರ. ಸಾವು-ನೋವಿನ ದುಃಖದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಹೇಳಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಕಟ್ಟಡ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸಚಿವ ಶಿವಳ್ಳಿಯವರು ಇಲ್ಲೇ ಇದ್ದು ಕಾರ್ಯಾಚರಣೆಯ ಹೊಣೆ ಹೊತ್ತಿದ್ದರು. ಅವರ ಅಗಲಿಕೆ ನಮಗೆ ಅಪಾರ ನೋವು ತಂದಿದೆ. ಅವರು ಅತ್ಯಂತ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಅವರ ವ್ಯಕ್ತಿತ್ವ ಸ್ಮರಿಸಿದರು.