ತುಮಕೂರು, ಮಾ.23-ಹಾಡಹಗಲೇ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.
ಪಾವಗಡದ ಪ್ರವಾಸಿ ಮಂದಿರದ ಮುಂಭಾಗ ಕವಿತಾ (36) ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ ಬಾಲಾಜಿ ಎಂಬಾತನೊಂದಿಗೆ 7 ವರ್ಷದ ಹಿಂದೆ ಆಂಧ್ರಪ್ರದೇಶದ ತುರುಕಲಪಟ್ಟಂ ಗ್ರಾಮದ ಕವಿತಾ ಅವರ ಮದುವೆಯಾಗಿತ್ತು. ಕಳೆದ ಮೂರು ವರ್ಷಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇಂದು ಬೆಳಗ್ಗೆ ಅಂಗಡಿಯಲ್ಲಿ ಸಾಮಾನು ಖರೀದಿಸಲೆಂದು ವೆಂಕಟಾಪುರದಿಂದ ಪಾವಗಡಕ್ಕೆ ಕವಿತಾ ಬಂದಿದ್ದರು. ಈ ವೇಳೆ ಪ್ರವಾಸಿ ಮಂದಿರದ ಬಳಿ ಕವಿತಾ ನಿಂತಿದ್ದಾಗ, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಕೂಡಲೇ ಪಾವಗಡದ ಸಬ್ಇನ್ಸ್ಪೆಕ್ಟರ್ ಮಧುಸೂದನ್ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಕೊಲೆ ಆರೋಪಿಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಮೃತ ದೇಹವನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರು ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಘಟನಾ ಸ್ಥಳದಲ್ಲಿನ ಸಿಸಿ ಟಿವಿ ದೃಶ್ಯಾವಳಿ ಪಡೆದುಕೊಂಡಿದ್ದು, ಅತಿ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದರು.