ನವದೆಹಲಿ: ಪಕ್ಷದಲ್ಲಿದ್ದೇ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ರೆಬಲ್ ಸಂಸದ, ನಟ ಶತೃಘ್ನ ಸಿನ್ಹಾ ಅವರ ಹೆಸರನ್ನು ಪಕ್ಷದ ಅಭ್ಯರ್ಥಿಗಳ ಪಟ್ಟಿಯಿಂದ ಬಿಜೆಪಿ ಕೈಬಿಟ್ಟಿದ್ದು, ಸಿನ್ಹಾ ಬದಲಿಗೆ ರವಿಶಂಕರ್ ಪ್ರಸಾದ್ ಗೆ ಟಿಕೆಟ್ ನೀಡಿದೆ.
ಬಿಹಾರ ಲೋಕಸಭೆಯ 40 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಪಕ್ಷ ಬಿಡುವ ಸೂಚನೆಯನ್ನು ನೀಡಿದ್ದ ಮಧ್ಯಪ್ರದೇಶದ ಪಾಟ್ನಾ ಸಾಹೀಬ್ ಕ್ಷೇತ್ರದ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಪಟ್ಟಿಯಿಂದ ಕೈಬಿಟ್ಟಿದೆ.
ಶತ್ರುಘ್ನ ಸಿನ್ಹಾ ಅವರ ಬದಲಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಬಿಹಾರದಲ್ಲಿ ಬಿಜೆಪಿ ಮತ್ತು ಜನತಾ ದಳ(ಒಕ್ಕೂಟ)ವು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಮತ್ತು ಲೋಕ ಜನಶಕ್ತಿ ಪಕ್ಷ(LJP) ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಶತ್ರುಘ್ನ ಸಿನ್ಹಾಗೆ ಟಿಕೆಟ್ ನಿರಾಕರಿಸಿರುವುದರ ಜತೆಗೆ ಬಿಜೆಪಿ ಸೈಯದ್ ಶಾನವಾವಾಜ್ ಹುಸೈನ್‌ಗೆ ಭಾಗಲ್‌ಪುರ ಕ್ಷೇತ್ರವನ್ನು ನೀಡದಿರಲು ನಿರ್ಧರಿಸಿದೆ. ಇವರ ಬದಲಿಗೆ ಗಿರಿರಾಜ್ ಸಿಂಗ್ ಗೆ ಟಿಕೆಟ್ ನೀಡಲಾಗಿದೆ.
ನಟರಾಗಿದ್ದು ರಾಜಕೀಯಕ್ಕೆ ಧುಮುಕಿದ್ದ ಶತ್ರುಘ್ನ ಸಿನ್ಹಾ 2009ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶೇಖರ್ ಸುಮನ್ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದರು. ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದ ಸಿನ್ಹಾರಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತಲೇ ಬಂದಿತ್ತು.
Lok Sabha election 2019: BJP drops Shatrughan Sinha, fields Rashankar prasad