ನವದೆಹಲಿ, ಮಾ.22- ಪಾಕಿಸ್ತಾನ ಬೆಂಬಲಿತ ಜೈಷ್-ಎ-ಮಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕುಖ್ಯಾತ ಉಗ್ರಗಾಮಿ ಸಜ್ಜದ್ ಖಾನ್ ದೆಹಲಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಬಲಿಯಾದ ಪುಲ್ವಾಮಾ ಉಗ್ರಗಾಮಿ ದಾಳಿ ಮಾಸ್ಟರ್ಮೈಂಡ್ ಮುದಸಿರ್ನ ಪರಮಾಪ್ತನಾಗಿದ್ದ ಸಜ್ಜದ್ ಹಾಗೂ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ ಕುಪ್ರಸಿದ್ಧ ಉಗ್ರಗಾಮಿ.
ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದಳದ ವಿಶೇಷ ತಂಡ ನಿನ್ನೆ ತಡರಾತ್ರಿ ರಾಜಧಾನಿ ದೆಹಲಿಯ ಲಾಲಾ ಲಜಪತರಾಯ್ ಮಾರುಕಟ್ಟೆ ಪ್ರದೇಶದಲ್ಲಿ ಸಾಜಿದ್ನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷಘಟಕ)ಪ್ರಮೋದ್ ಸಿಂಗ್ ಖುಷ್ವಾ ಇಂದು ಸುದ್ದಿಗಾರರಿಗೆ ತಿಳಿಸಿದರು.
ಪುಲ್ವಾಮಾ ಭಯೋತ್ಪಾದಕರ ದಾಳಿಯ ಮಾಸ್ಟರ್ ಮೈಂಡ್ ಮುದಸಿರ್ನನ್ನು ಒಂದು ವಾರದ ಹಿಂದಷ್ಟೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರು ಹೊಡೆದುಳಿಸಿದರು.
ಮುದಸಿರ್ನ ಬಲಗೈ ಬಂಟನಂತೆ ಇದ್ದ ಸಜ್ಜದ್ ಖಾನ್ ಆತನ ಸೂಚನೆಯಂತೆ ಹಲವು ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದ. ದೆಹಲಿಯಲ್ಲಿ ಭಯೋತ್ಪಾದನೆ ಕೃತ್ಯವೆಸಗಲು ಹಾಗೂ ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸಿಕೊಳ್ಳುವ ಕಾರ್ಯಕ್ಕೆ ನಿಯೋಜಿತನಾಗಿದ್ದ ಈತನ ಬಂಧನದಿಂದ ಮುಂದೆ ಸಂಭವಿಸಬಹುದಾಗಿದ್ದ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿವೆ.