ಬಿಜೆಪಿಗೆ ಸೇರ್ಪಡೆಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್

ನವದೆಹಲಿ, ಮಾ.22- ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯದಲ್ಲಿ ತಮ್ಮ ನೂತನ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

ಇಂದು ಕೇಂದ್ರದ ವಿತ್ತ ಸಚಿವ ಅರುಣ್‍ಜೇಟ್ಲಿ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ನರೇಂದ್ರ ಮೋದಿಯವರ ಆದರ್ಶಗಳನ್ನು ಮೆಚ್ಚಿ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿರುವ ಗೌತಿ ಲೋಕಸಭೆ ಚುನಾವಣೆಯಲ್ಲಿ ಚಂದೀನಿ ಚೌಕ್ ಕ್ಷೇತ್ರದಿಂದ ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಆರಂಭಿಸಲಿದ್ದಾರೆ.

ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೌತಿ, ರಾಜಕೀಯದ ಮೂಲಕ ದೇಶದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ತುಂಬಾ ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಆದರ್ಶದಂತೆ ನಾನು ಪಕ್ಷದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಇಚ್ಛೆಯನ್ನು ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ಗೌತಮ್‍ಗಂಭೀರ್ ತಮ್ಮ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಟ್ವಿಟ್ಟರ್‍ನಲ್ಲಿ 9 ಮಿಲಿಯನ್‍ಗೂ ಹೆಚ್ಚು ಫಾಲೋಯರ್‍ಗಳಿದ್ದಾರೆ.

2011ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಗಂಭೀರ್ ತಮ್ಮ 13 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ 58 ಟೆಸ್ಟ್, 147 ಏಕದಿನ, 37 ಟ್ವೆಂಟಿ-20 ಪಂದ್ಯಗಳನ್ನಾಡಿದ್ದು, ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಭಾಜನರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ