ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ದೆಹಲಿಯಲ್ಲಿರುವ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಅಳೆದು ತೂಗಿ ಕೈ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಅಂತಿಮ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿರುವ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾಗಿ, ಈಗಿರುವ ಎಲ್ಲ ಕ್ಷೇತ್ರದ ಎಂಪಿಗಳಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ರವಾನೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ನಡೆಯುವ ಸಿಇಸಿ ಸಭೆಯಲ್ಲಿ ಇದಕ್ಕೆ ಅಂತಿಮ ಮುದ್ರೆ ಬೀಳಲಿದೆ.
ಮೈಸೂರು, ಬೀದರ್, ಧಾರವಾಡ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಹಾವೇರಿ ಕ್ಷೇತ್ರಗಳಿಗೆ ಒಂದೊಂದೇ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ಮೈಸೂರಿನಿಂದ ವಿಜಯಶಂಕರ್, ಬೀದರ್ ಕ್ಷೇತ್ರದಿಂದ ಈಶ್ವರ ಖಂಡ್ರೆ, ಧಾರವಾಡ ಕ್ಷೇತ್ರದಿಂದ ಶಾಕೀರ್ ಸನದಿ ಹೆಸರನ್ನು ಸೂಚಿಸಲಾಗಿದೆ. ತಮ್ಮ ಪತ್ನಿಗೆ ಟಿಕೆಟ್ ನೀಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೇಳಿದ್ದರು. ಕೊನೆ ಕ್ಷಣದಲ್ಲಿ ಅವರ ಮನವೊಲಿಸಲು ರಾಜ್ಯ ನಾಯಕರು ಯಶಸ್ವಿಯಾಗಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ಅಂತಿಮ ಮಾಡಲಾಗಿದೆ.
ಬೆಂಗಳೂರು ದಕ್ಷಿಣದಿಂದ ಪ್ರಿಯಾಕೃಷ್ಣ ಹೆಸರನ್ನು ಅಂತಿಮ ಮಾಡಲಾಗಿದೆ. ಬೆಂಗಳೂರು ಕೇಂದ್ರದದಿಂದ ರಿಜ್ವಾನ್ ಅರ್ಷದ್, ಹಾವೇರಿ ಕ್ಷೇತ್ರದಿಂದ ಬಸವರಾಜ್ ಶಿವಣ್ಣನವರ್, ದಾವಣಗೆರೆಯಿಂದ ಎಸ್.ಎಸ್. ಮಲ್ಲಿಕಾರ್ಜುನ ಹೆಸರು ಶಿಫಾರಸ್ಸುಗೊಂಡಿದೆ.
ದಕ್ಷಿಣ ಕನ್ನಡ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಕ್ಷೇತ್ರಗಳಿಂದ ಎರಡೆರಡು ಹೆಸರನ್ನು ಸೂಚಿಸಿದ್ದಾರೆ. ದಕ್ಷಿಣ ಕನ್ನಡದಿಂದ ರಮಾನಾಥ ರೈ ಹಾಗೂ ಮಿಥುನ್ ರೈ, ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್ ಹಾಗೂ ಅಜಯ್ ಕುಮಾರ್ ಸರನಾಯಕ್, ಕೊಪ್ಪಳ ಕ್ಷೇತ್ರಕ್ಕೆ ರಾಜಶೇಖರ್ ಹಿಟ್ನಾಳ ಮತ್ತು ಬಸವರಾಜ್ ರಾಯರೆಡ್ಡಿ, ಬೆಳಗಾವಿಯಲ್ಲಿ ಸಾದನವರ್ ಮತ್ತು ಚನ್ನರಾಜ್ ಹೆಬ್ಬಾಳ್ಕರ್ ಹೆಸರು ಶಿಫಾರಸ್ಸುಗೊಂಡಿದೆ.
ಇಂದು ನಡೆಯುವ ಚುನಾವಣಾ ಸಮಿತಿಯ ಸಭೆಯಲ್ಲಿ ಎಲ್ಲವೂ ಅಂತಿಮ ತೀರ್ಮಾನಗೊಳ್ಳಲಿದೆ. ಹಾಗಾಗಿ, ಶೀಘ್ರವೇ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಲಿದೆ. ಏಪ್ರಿಲ್ 18 ಹಾಗೂ 23ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ.