ಚೆನ್ನೈ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ನಟ ಕಮಲ್ ಹಾಸನ್ರ ಮಕ್ಕಳ್ ನೀಧಿ ಮೈಯಂ ಪಕ್ಷವು ಮೊದಲ ಹಂತವಾಗಿ ತಮಿಳುನಾಡು ಮತ್ತು ಪಾಂಡಿಚೆರಿಯ 21 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
19 ಸೀಟುಗಳ ಎರಡನೇ ಪಟ್ಟಿಯು ಮಾ.24ರಂದು ಕೊಯಮತ್ತೂರಿನಲ್ಲಿ ಬಿಡುಗಡೆಯಾಗಲಿದ್ದು, ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕಮಲ್ ಹಾಸನ್ರ ಹೆಸರಿಲ್ಲ. ಆದರೆ, ನಿವೃತ್ತ ಐಪಿಎಸ್ ಅಧಿಕಾರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಒಳಗೊಂಡಿದೆ.
ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ನಾನು ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ಆದರೆ, ಪಕ್ಷದ ಕಾರ್ಯಕಾರಿ ಸಮಿತಿಯು ನನ್ನ ಸ್ಪರ್ಧೆಯ ಬಗ್ಗೆ ನಿರ್ಧಾರಕ್ಕೆ ಬರಬೇಕಿದೆ. ಮಾ. 24ರಂದು ಬಿಡುಗಡೆಯಾಗುವ ಪಟ್ಟಿಯಲ್ಲಿ ಮತ್ತಷ್ಟು ಆಶ್ಚರ್ಯಗಳು ಕಾದಿವೆ ಎಂದು ತಿಳಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಮತ್ತು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯ ಮೌರ್ಯ ಉತ್ತರ ಚೆನ್ನೈನಿಂದ ಸ್ಪರ್ಧಿಸಲಿದ್ದಾರೆ. ಕಮೀಲ್ ನಾಸರ್ ಮಾತ್ರ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದು, ಇವರು ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಪ್ರಖ್ಯಾತ ನಟ ನಾಸರ್ ಅವರ ಪತ್ನಿ ಕೇಂದ್ರೀಯ ಚೆನ್ನೈನಿಂದ ಸ್ಪರ್ಧಿಸಲಿದ್ದಾರೆ. ಡಾ. ಮಾಸ್ ಸುಬ್ರಮಣಿಯನ್ ಅವರು ಪಾಂಡಿಚೆರಿಯಿಂದ ಕಣಕ್ಕಿಳಿಯಲಿದ್ದಾರೆ.
Kamal Haasan’s Makkal Needhi Maiam Releases First List For Polls